ಬೆಂಗಳೂರು: ಜನ ಬೆಲೆ ಏರಿಕೆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಅವರು ಸಮೃದ್ಧವಾಗಿದ್ದಾರೆ. ಜನರಿಗೆ ಬೆಲೆ ಏರಿಕೆಗಿಂತ ಭಾವನಾತ್ಮಕ ವಿಷಯಗಳೇ ಹೆಚ್ಚು ಖುಷಿ ನೀಡುತ್ತೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದರು.
ವಿಧಾನಸೌಧದಲ್ಲಿ ಪಂಚರಾಜ್ಯ ಚುನಾವಣೆಯ ನಂತರ ಬೆಲೆ ಏರಿಕೆ ಆದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಬಂದ ಬೆನ್ನಲ್ಲೇ ಗ್ಯಾಸ್ ಮತ್ತಿತರ ಬೆಲೆ ಏರಿಕೆ ಆಗಿದೆ. ಜನ ಇಂದು ಹಣವಂತರಾಗಿದ್ದಾರೆ. ಮೌನವಾಗಿ ಬೆಂಬಲಿಸಿದ್ದಾರೆ. ಜನರಿಗೆ ಈಗ ಧರ್ಮದ ಅವಶ್ಯಕತೆ ಇದೆ. ಸಮಸ್ಯೆಗಳ ಬಗ್ಗೆ ಚರ್ಚೆ ಅವಶ್ಯಕತೆ ಇಲ್ಲ ಎಂದರು.
ಭಗವದ್ಗೀತೆ, ದೇಶ, ಭಾಷೆ, ಧರ್ಮ ಜನರಿಗೆ ಬೇಕಾಗಿದೆ. ಜನ ಎಷ್ಟೇ ಬೆಲೆ ಏರಿಕೆ ಆದರೂ ಕೊಡಲು ಸಿದ್ಧರಿದ್ದಾರೆ. ಮೋದಿ ಮಾತಿನಿಂದಲೆ ಅಭಿವೃದ್ಧಿಯಾಗಿದ್ದಾರೆ. ಬೆಲೆ ಏರಿಕೆ ಈಗ ಜನರಿಗೆ ಚರ್ಚೆಯ ವಿಷಯ ಅಲ್ಲ. ಏನಿದ್ದರೂ ಭಾವನಾತ್ಮಕ ಮೋಡಿ ಮಾಡುವ ಮಾತುಗಳೇ ಪ್ರಿಯ. ಮಾತಿನಲ್ಲೇ ಅಭಿವೃದ್ಧಿ ಮಾಡುವವವರೇ ಇಷ್ಟ ಎಂದು ಟೀಕಿಸಿದರು.