ಶಿವಮೊಗ್ಗ: ನಗರದ ಸಹ್ಯಾದ್ರಿ ಕಾಲೇಜಿನ ಅತಿಥಿ ಉಪನ್ಯಾಸಕಿಯೊಬ್ಬರು ಪ್ರೇಮವೈಫಲ್ಯದಿಂದ ಮನನೊಂದು ತನ್ನ ಪ್ರಿಯಕರ ಮದುವೆಯಾದ ದಿನವೇ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆಕೆ ಭಾನುವಾರ ಬೆಳಗ್ಗೆ ತಮ್ಮ ಮನೆಯ ಬೆಡ್‌ರೂಮ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮನೆಯಲ್ಲಿ ಡೆತ್‌ನೋಟ್ ಪತ್ತೆಯಾಗಿದ್ದು ದೊಡ್ಡಪೇಟೆ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಏನಿದು ಪ್ರಕರಣ?: ಸಹ್ಯಾದ್ರಿ ಕಾಲೇಜಿನಲ್ಲಿ ಓದುತ್ತಿದ್ದಾಗಲೇ ಆಕೆಗೆ ವಿನೋಬನಗರದ ನಿವಾಸಿಯಾದ ತನ್ನ ಸಹಪಾಠಿಯೊಂದಿಗೆ ಸ್ನೇಹ ಬೆಳೆದಿತ್ತು. ಆನಂತರ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಬಳಿಕ ವೈಮನಸ್ಸು ಉಂಟಾಗಿತ್ತು. ನಂತರ ಪ್ರಿಯಕರನಿಗೆ ಐದು ತಿಂಗಳ ಹಿಂದಷ್ಟೇ ನಗರದ ಪ್ರತಿಷ್ಠಿತ ಖಾಸಗಿ ಕಾಲೇಜಿನಲ್ಲಿ ಕಾಯಂ ಉಪನ್ಯಾಸಕ ಹುದ್ದೆ ಸಿಕ್ಕಿತ್ತು. ಭಾನುವಾರ ಪ್ರಿಯಕರನ ಮದುವೆ ನಡೆದಿತ್ತು. ಇದರಿಂದ ಮನನೊಂದು ಆಕೆ ನೇಣು ಬಿಗಿದುಕೊಂಡಿದ್ದಾರೆ.
ಪ್ರಿಯಕರನ ಮನೆ ಮುಂದೆ ಗಲಾಟೆ: ಪ್ರಿಯಕರನಿಗೆ ಕುವೆಂಪು ವಿವಿಯ ಪ್ರಾಧ್ಯಾಪಕಿಯೊಬ್ಬರ ಪುತ್ರಿಯೊಂದಿಗೆ ವಿವಾಹ ನಿಶ್ಚಯವಾಗಿತ್ತು. ಈ ವಿಷಯ ತಿಳಿದ ಆಕೆ ಪ್ರಿಯಕರನ ಮನೆಗೆ ಹೋಗಿ ಗಲಾಟೆ ಮಾಡಿದ್ದರು. ಆದರೂ ಪ್ರಿಯಕರ ಆಕೆಯನ್ನು ಮದುವೆಯಾಗಲು ನಿರಾಕರಿಸಿದ್ದ. ಶನಿವಾರ ರಾತ್ರಿ ಪ್ರಿಯಕರನ ಮದುವೆ ಆರತಕ್ಷತೆ ನೆರವೇರಿತ್ತು. ಇದರಿಂದ ರಾತ್ರಿಯಿಂದಲೇ ಮಾನಸಿಕವಾಗಿ ನೊಂದಿದ್ದ ಆಕೆ ಭಾನುವಾರ ಬೆಳಗ್ಗೆಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.