ಬೆಂಗಳೂರು: ವಿಜಯಪುರ ಜಿಲ್ಲೆಯ ತಾಳಿಕೋಟೆಯ ಉಪ ತಹಶೀಲ್ದಾರ್ ಅಶೋಕ ಶರ್ಮಾ ಅವರ ಮಗಳು ದಾನೇಶ್ವರಿ (23) ಅನುಮಾನಾಸ್ಪದ ರೀತಿಯಲ್ಲಿ ನಗರದಲ್ಲಿ ಮೃತಪಟ್ಟಿದ್ದಾರೆ. ಮೈ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿರುವ ಶಂಕೆ ವ್ಯಕ್ತಪಡಿಸಿ ಅವರ ಸಹೋದರಿ ಪೊಲೀಸರಿಗೆ ದೂರು ನೀಡಿದ್ದಾರೆ.
‘ವಿಜಯಪುರ ಬಿಎಲ್‌ಡಿಇಎ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಮುಗಿಸಿದ್ದ ದಾನೇಶ್ವರಿ, ಉದ್ಯೋಗಕ್ಕೆ ಪೂರಕ ಕೋರ್ಸ್ ಅಧ್ಯಯನಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಬಿಟಿಎಂ ಲೇಔಟ್‌ನ ಪೇಯಿಂಗ್ ಗೆಸ್ಟ್ ಕಟ್ಟಡವೊಂದರಲ್ಲಿ ವಾಸವಿದ್ದರು.
ಶೇ 75ರಷ್ಟು ಸುಟ್ಟ ಗಾಯಗಳಾಗಿದ್ದ ಅವರನ್ನು ಮಾರ್ಚ್ 15ರಂದು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟರು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
‘ಪರಿಶಿಷ್ಟ ಜಾತಿಯ ದಾನೇಶ್ವರಿ ಹಾಗೂ ಲಿಂಗಾಯತ ಸಮುದಾಯದ ಶಿವಕುಮಾರ್ ಹಿರೇಹಾಳ ಪರಸ್ಪರ ಪ್ರೀತಿಸುತ್ತಿದ್ದರು. ಮದುವೆಯಾಗುವಂತೆ ಕೇಳಿದ್ದಕ್ಕಾಗಿ ಸಿಟ್ಟಾದ ಶಿವಕುಮಾರ್, ಕೊಲೆ ಮಾಡಿ ಪರಾರಿಯಾಗಿರುವ ಬಗ್ಗೆ ಯುವತಿಯ ಸಹೋದರಿ ದೂರು ನೀಡಿದ್ದಾರೆ. ಪರಿಶಿಷ್ಟ ಜಾತಿ, ಪಂಗಡ ದೌರ್ಜನ್ಯ ತಡೆ ಕಾಯ್ದೆ ಹಾಗೂ ಕೊಲೆ ಆರೋಪದಡಿ ಶಿವಕುಮಾರ್ ವಿರುದ್ಧ ಎಫ್‌ಐಆರ್ ದಾಖಲಿಸಿ, ತನಿಖೆ ಮುಂದುವರಿಸಲಾಗಿದೆ’ ಎಂದೂ ಹೇಳಿದರು.
ಕಾಲೇಜು ಸಹಪಾಠಿಗಳು: ‘ಸಿಂದಗಿ ತಾಲ್ಲೂಕಿನ ಗೋಲಗೇರಿಯ ದಾನೇಶ್ವರಿ ಹಾಗೂ ಬಾದಾಮಿ ನಿವಾಸಿ ಶಿವಕುಮಾರ್, ವಿಜಯಪುರದ ಬಿಎಲ್‌ಡಿಇಎ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದರು.
ಇಬ್ಬರ ಸ್ನೇಹವು ಪ್ರೀತಿಯಾಗಿ ಮಾರ್ಪಟ್ಟಿತ್ತು. ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ವ್ಯಾಸಂಗ ಮುಗಿಸಿದ್ದ ಶಿವಕುಮಾರ್, ಕೆಲಸಕ್ಕಾಗಿ ನಗರಕ್ಕೆ ಬಂದು ವೀರಸಂದ್ರದಲ್ಲಿ ವಾಸವಿದ್ದರು. ದಾನೇಶ್ವರಿ ಸಹ ಇತ್ತೀಚೆಗೆ ನಗರಕ್ಕೆ ಬಂದಿದ್ದರು. ಆರೋಪಿಯನ್ನು ಹಲವು ಬಾರಿ ಆತನ ಮನೆಯಲ್ಲೇ ಭೇಟಿಯಾಗಿದ್ದರು’ ಎಂದೂ ಹೇಳಿದರು.