ಬೆಂಗಳೂರು: ಕೊರೊನಾ ಸಮಯದಲ್ಲಿಯೇ ಡೆಡ್ಲಿ ಗ್ಯಾಂಗ್ ಒಂದು ಸಿಲಿಕಾನ್ ಸಿಟಿಗೆ ಎಂಟ್ರಿಯಾಗಿದೆ. ಸುಳ್ಳು ದಾಖಲೆ ಸೃಷ್ಟಿಸಿ ಮನೆ ಧ್ವಂಸ ಮಾಡಿದ ಘಟನೆ ಬೆಂಗಳೂರಿನ ಪ್ಯಾಲೇಸ್ ಗುಟ್ಟಹಳ್ಳಿ ಮುನೇಶ್ವರ ಟೆಂಪಲ್ ಬಳಿ ನಡೆದಿದೆ.
ಹೌದು. ಖದೀಮರ ತಂಡವೊಂದು ಮಟಮಟ ಮಧ್ಯಾಹ್ನವೇ ಬಂದು ಜೆಸಿಬಿ ಮೂಲಕ ಮನೆ ಕೆಡವಿ ಮನೆಯಲ್ಲಿದ್ದ ಹಣ, ಒಡವೆ, ವಸ್ತುಗಳನ್ನ ಕದ್ದೊಯ್ದಿದೆ. ಈ ವೇಳೆ ಪ್ರಶ್ನೆ ಮಾಡಿದ ಮನೆಯಲ್ಲಿದ್ದ ಮಹಿಳೆಗೆ ಅವಾಚ್ಯ ಪದಗಳಿಂದ ನಿಂದಸಿದ್ದಲ್ಲದೆ, ಹಲ್ಲೆ ಮಾಡಿದ ಆರೋಪ ಕೂಡ ಕೇಳಿ ಬಂದಿದೆ.
ಸದ್ಯ ಮನೆ ಕಳೆದುಕೊಂಡು ಕುಟುಂಬ ಬೀದಿಗೆ ಬಿದ್ದಿದ್ದು, ರಾತ್ರಿ ಇಡೀ ಮಹಿಳೆಯರು ಬೀದಿಯಲ್ಲೇ ಮಲಗಿದ್ದಾರೆ. ಈ ಸಂಬಂಧ ಎಫ್‍ಐಆರ್ ಕೊಟ್ಟರೂ ವೈಯಾಲಿಕಾವಲ್ ಪೊಲೀಸರು ಸ್ಥಳಕ್ಕೆ ಬಂದಿಲ್ಲ ಎಂದು ಕುಟುಂಬ ಪೊಲೀಸರ ವಿರುದ್ಧವೂ ಆಕ್ರೋಶ ಹೊರಹಾಕಿದೆ.
ಗಂಗಮ್ಮ (53) ಮತ್ತು ಅವರ ಮಕ್ಕಳು ಪ್ಯಾಲೆಸ್ ಗುಟ್ಟಹಳ್ಳಿಯ 4ನೇ ಕ್ರಾಸ್ ಮುನೇಶ್ವರ ಬ್ಲ್ಯಾಕ್ ನಲ್ಲಿ ಕಳೆದ 40 ವರ್ಷಗಳಿಂದ ವಾಸವಿದ್ದರು. 2008 ರಲ್ಲಿ ಕೃಷ್ಣಸ್ವಾಮಿ ಪಿಳ್ಳೆ ಎಂಬವರು ಈ ಮನೆಯನ್ನ ಗಂಗಮ್ಮ ಅವರಿಗೆ ಜಿಪಿಎ ಮಾಡಿಕೊಟ್ಟಿದ್ರು. ಈ ಸ್ವತ್ತಿನ ಮೇಲೆ ಸಿಟಿ ಸಿವಿಲ್ ಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದೆ. ಈ ನಡುವೆಯೇ ಭಾನುವಾರ ಮಧ್ಯಾಹ್ನ ವೇಣು, ರಮೇಶ್, ಮಹೇಶ್ ಎಂಬವರು ಮನೆಗೆ ನುಗ್ಗಿ, ಮನೆಯಲ್ಲಿರುವ ವಸ್ತುಗಳನ್ನ ಕದ್ದು ಜೆಸಿಬಿಯಿಂದ ಮನೆಯನ್ನ ನೆಲಸಮ ಮಾಡಿದ್ದಾರೆ.