ಬೆಂಗಳೂರು: ಪ್ರಸಕ್ತ ಆರ್ಥಿಕ ವರ್ಷ ಕೊನೆಯಾಗುತ್ತಾ ಬಂದಿದ್ದರೂ ಕಳೆದ ವರ್ಷದ 52 ಬಜೆಟ್ ಘೋಷಣೆಗಳಲ್ಲಿ ಕೆಲವಕ್ಕೆ ಆದೇಶ ಹೊರಡಿಸಿಲ್ಲ, ಇನ್ನು ಕೆಲವನ್ನು ಕೈಬಿಡಲಾಗಿದೆ. ಯಾವ ಉದ್ದೇಶಕ್ಕೆ ಈವರೆಗೆ ಆದೇಶ ಹೊರಡಿಸಿಲ್ಲ ಎಂದು ಸರ್ಕಾರ ಈ ಬಜೆಟ್‌ನಲ್ಲಿ ಹೇಳಬೇಕಿತ್ತು. ಅದನ್ನೂ ಸಹ ಮಾಡಿಲ್ಲ. ಇದು ಜನಪರವಾದ ಸರ್ಕಾರ ನಡೆದುಕೊಳ್ಳುವ ರೀತಿಯಲ್ಲ. ಆರ್ಥಿಕ ಶಿಸ್ತನ್ನು ಕಾಪಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
ವಿಧಾನಸಭೆಯಲ್ಲಿ ಇಂದು ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಚಾಮರಾಜನಗರದಲ್ಲಿ ಅರಿಶಿನ ಮಾರುಕಟ್ಟೆಯನ್ನು ಸಾರ್ವಜನಿಕ, ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಕಳೆದ ಬಜೆಟ್‌ನಲ್ಲಿ ಘೋಷಿಸಿ, ನಂತರ ಯೋಜನೆಯನ್ನು ಕೈಬಿಡಲಾಗಿದೆ ಎಂದು ಆಕ್ಷನ್ ಟೇಕನ್ ವರದಿಯಲ್ಲಿ ತಿಳಿಸಲಾಗಿದೆ. ಯೋಜನೆ ಕೈಬಿಡುವುದಾಗಿದ್ದರೆ ಘೋಷಣೆ ಮಾಡಿದ್ದು ಏಕೆ? ಚಾಮರಾಜನಗರದ ಜನ ತಮ್ಮ ಜಿಲ್ಲೆಗೆ ಅರಿಶಿನ ಮಾರುಕಟ್ಟೆ ಬರಲಿದೆ ಎಂಬ ಆಸೆ ಇಟ್ಟುಕೊಂಡಿದ್ದರು, ಸರ್ಕಾರ ಯೋಜನೆಯನ್ನೇ ಕೈಬಿಟ್ಟರೆ ಜನ ಏನು ಮಾಡಬೇಕು? ಯೋಜನೆ ಘೋಷಿಸಿ, ಹಣ ಒದಗಿಸಲಾಗದೆ ಅದನ್ನು ಕೈಬಿಟ್ಟು ಜನರಿಗೆ ಸರ್ಕಾರ ದ್ರೋಹ ಎಸಗಿದೆ ಎಂದು ಕಿಡಿಕಾರಿದರು.