ನವದೆಹಲಿ: ಇಡೀ ವಿಶ್ವದಲ್ಲಿ ಭಾರತದ ಮಹಿಮೆ ಮತ್ತೊಮ್ಮೆ ಪ್ರಚಾರಕ್ಕೆ ಬಂದಿದೆ. ಭಾರತದ ಮಣ್ಣಿನಲ್ಲಿ ಜೀವಿಸಿ, ಭಾರತದ ಅನ್ನವನ್ನು ಉಂಡು ಭಾರತದ ಬೆನ್ನಿಗೆ ಚೂರಿ ಹಾಕುವಲ್ಲಿ ಕೆಲವು ಭಾರತೀಯರು ಎನಿಸಿಕೊಂಡವರೇ ಒಂದೆಡೆ ಅಪಪ್ರಚಾರದಲ್ಲಿ ತೊಡಗಿಕೊಂಡರೆ, ಶತ್ರರಾಷ್ಟ್ರ ಎನಿಸಿಕೊಂಡಿರುವ ಪಾಕಿಸ್ತಾನಿಗಳು ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ಹೇಗೆ ಭಾರತದ ಧ್ವಜವನ್ನು ಬಳಕೆ ಮಾಡಿಕೊಂಡರು ಎನ್ನುವುದನ್ನು ಈ ವಿದ್ಯಾರ್ಥಿಗಳ ಬಾಯಲ್ಲಿಯೇ ಕೇಳಿದರೆ ಒಳ್ಳೆಯದು.
ಯೂಕ್ರೇನ್ನಲ್ಲಿ ಸಿಲುಕಿರುವ ಅಸಂಖ್ಯ ಭಾರತೀಯರ ವಾಪಸಿಗೆ ಭಾರತ ಸರ್ಕಾರ ಇನ್ನಿಲ್ಲದ ಶ್ರಮ ವಹಿಸುತ್ತಿದೆ. ರಷ್ಯಾ ಯೂಕ್ರೇನ್ ವಿರುದ್ಧ ಯುದ್ಧ ಸಾರುತ್ತಿದೆ ಎಂಬ ಬಗ್ಗೆ ವರದಿ ಬಂದಾಗಲೇ ಅಲ್ಲಿಯ ಭಾರತೀಯರಿಗೆ ಎಚ್ಚರಿಕೆ ಕೊಡಲಾಗಿತ್ತು. ಆದಾಗ್ಯೂ ಯೂಕ್ರೇನ್ನ ಶಿಕ್ಷಣ ಸಂಸ್ಥೆಗಳು ಈ ಬಗ್ಗೆ ಹೆಚ್ಚಿಗೆ ತಲೆಕೆಡಿಸಿಕೊಳ್ಳದ ಕಾರಣ, ಭಾರತದ ವಿದ್ಯಾರ್ಥಿಗಳ ಸ್ಥಿತಿ ಅತ್ಯಂತ ಶೋಚನೀಯವಾಗಿದ್ದು, ಇದಾಗಲೇ ಓರ್ವ ಕನ್ನಡಿಗ ಪ್ರಾಣವನ್ನೂ ಕಳೆದುಕೊಂಡಿದ್ದಾನೆ.
ಅದೇ ಇನ್ನೊಂದೆಡೆ, ಭಾರತದ ಧ್ವಜವನ್ನು ತೋರಿಸಿ ಅದೆಷ್ಟೋ ವಿದ್ಯಾರ್ಥಿಗಳು ಪ್ರಾಣ ಕಾಪಾಡಿಕೊಂಡು ಗಡಿ ದಾಟಿ ಸುರಕ್ಷಿತವಾಗಿ ಬರುತ್ತಿದ್ದಾರೆ. ಭಾರತದ ಧ್ವಜವನ್ನು ತೋರಿಸಿದಾಕ್ಷಣ ಅವರನ್ನು ಯಾವುದೇ ಚೆಕಿಂಗ್ಗೆ ಒಳಪಡಿಸದೇ ಗಡಿಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಈ ಬಗ್ಗೆ ಸುದ್ದಿಯಾಗುತ್ತಿದ್ದಂತೆಯೇ ಪಾಕಿಸ್ತಾನ ಹಾಗೂ ಟರ್ಕಿಯ ವಿದ್ಯಾರ್ಥಿಗಳು ಇದೇ ಮಾರ್ಗವನ್ನು ಅನುಸರಿಸುತ್ತಿದ್ದಾರಂತೆ. ಈ ಕುರಿತು ಭಾರತದ ವಿದ್ಯಾರ್ಥಿಗಳು ಅನುಭವ ಹಂಚಿಕೊಂಡಿದ್ದಾರೆ.
ಭಾರತದ ಸರ್ಕಾರ ‘ಆಪರೇಷನ್ ಗಂಗಾ’ ಮಿಷನ್ ಮೂಲಕ ಯೂಕ್ರೇನ್ ನಗರಗಳಿಂದ ಸಮೀಪದ ಬೇರೆ ರಾಷ್ಟ್ರಗಳಿಗೆ ವಾಹನಗಳ ಮೂಲಕ ಭಾರತೀಯರನ್ನು ಸಾಗಿಸಿ, ಅಲ್ಲಿಂದ ಭಾರತಕ್ಕೆ ಏರ್ಲಿಫ್ಟ್ ಮಾಡಲಾಗುತ್ತಿದೆ. ಈ ವೇಳೆ ವಾಹನಗಳಲ್ಲಿ ಭಾರತೀಯ ಧ್ವಜವನ್ನು ಪ್ರದರ್ಶಿಸಲಾಗುತ್ತಿದ್ದು, ಅವರಿಗೆ ಯಾವುದೇ ಚೆಕಿಂಗ್ ಮಾಡದೇ ಬಿಡಲಾಗುತ್ತಿದೆ. ತಮ್ಮ ಪ್ರಾಣವನ್ನು ಕಾಪಾಡಿಕೊಳ್ಳಲು ಯೂಕ್ರೇನ್ನಿಂದ ರೊಮೇನಿಯಾದ ಬುಕಾರೆಸ್ಟ್ ನಗರಕ್ಕೆ ಆಗಮಿಸಿದ ಕೆಲವು ಪಾಕಿಸ್ತಾನಿ ಮತ್ತು ಟರ್ಕಿಶ್ ವಿದ್ಯಾರ್ಥಿಗಳು ಭಾರತದ ಧ್ವಜವನ್ನು ಹಿಡಿದು ಯೂಕ್ರೇನ್ನ ವಿವಿಧ ಚೆಕ್‌ಪೋಸ್ಟ್‌ಗಳನ್ನು ಸುರಕ್ಷಿತವಾಗಿ ದಾಟಿದ್ದಾರೆ! ಭಾರತದ ತ್ರಿವರ್ಣ ಧ್ವಜವನ್ನು ಟರ್ಕಿಶ್ ಮತ್ತು ಪಾಕಿಸ್ತಾನಿ ವಿದ್ಯಾರ್ಥಿಗಳು ಸಹ ಬಳಸುತ್ತಿದ್ದಾರೆ ಎಂದು ವಿದ್ಯಾರ್ಥಿ ಅನುಭವ ಹಂಚಿಕೊಂಡಿದ್ದಾನೆ.