ಬೆಂಗಳೂರು: ಉಕ್ರೇನ್ ಮತ್ತು ರಷ್ಯಾ ನಡುವಿನ ಸಂಘರ್ಷ ಇಂದು 5ನೇ ದಿನಕ್ಕೆ ಕಾಲಿಟ್ಟಿದೆ. ರಷ್ಯಾ ದಾಳಿಯಿಂದ ಪುಟ್ಟ ರಾಷ್ಟ್ರ ಉಕ್ರೇನ್ ಕಂಗೆಟ್ಟಿದ್ದು, ವಿದ್ಯಾಭ್ಯಾಸಕ್ಕಾಗಿ ಭಾರತದಿಂದ ತೆರಳಿದ ವಿದ್ಯಾರ್ಥಿಗಳು ಜೀವ ಭಯದಲ್ಲಿದ್ದಾರೆ. ಎಲ್ಲಾ ವಿದ್ಯಾರ್ಥಿಗಳನ್ನು ತಮ್ಮ ತಾಯ್ನಾಡಿಗೆ ಕರೆದುಕೊಂಡು ಬರುವಲ್ಲಿ ಸತತ ಪ್ರಯತ್ನ ನqಯುತ್ತಿದ್ದು, ಈಗಾಗಲೇ ಹಲವಾರು ಮಂದಿ ವಾಪಸ್ಸಾಗಿದ್ದು, ತಮ್ಮ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅಂತೆಯೇ ವಿದ್ಯಾರ್ಥಿನಿಯೊಬ್ಬಳು ತಮ್ಮ ದೇಶದ ಧ್ವಜ ಇರುವ ಬಸ್ ಕಂಡಾಗ ಆದ ಸಂತಸವನ್ನು ಶೇರ್ ಮಾಡಿಕೊಂಡಿದ್ದಾಳೆ.
ಹೌದು. ಉಕ್ರೇನ್ ನಿಂದ ವಾಪಾಸ್ ಆದ ವಿದ್ಯಾರ್ಥಿನಿ ದೀಪಿಕಾ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ನಮ್ಮ ಹತ್ತಿರದ ಸಿಟಿಗಳಲ್ಲಿ ಬಾಂಬ್ ಬ್ಲಾಸ್ಟ್ ಆಗ್ತಿದ್ರಿಂದ ಭಯ ಆಗಿತ್ತು. ನಿರಂತರವಾಗಿ ನಾವು ಸರ್ಕಾರಕ್ಕೆ ಮನವಿ ಮಾಡುತ್ತಿದ್ದೆವು. ಯಾವಾಗ ನಮ್ಮ ತ್ರಿವರ್ಣ ಧ್ವಜ ಇದ್ದ ಬಸ್ಸುಗಳನ್ನ ನೋಡಿದ್ವೋ ಮತ್ತೆ ಬದುಕಿದಂತಾಯ್ತು. ನಮ್ಮ ದೇಶಕ್ಕೆ ಬಂದ ಕೂಡಲೇ ನಮ್ಮ ತಾಯಿಯನ್ನ ನೋಡಿದಂತಾಯ್ತು ಎಂದು ತಿಳಿಸಿದ್ದಾಳೆ.