ಬೆಳಗಾವಿ: ಪೀರನವಾಡಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿವಾದ ಸುಖಾಂತ್ಯ ಕಂಡ ಬೆನ್ನಲ್ಲೇ ಸಚಿವರ ದಂಡೇ ಪೀರನವಾಡಿಗೆ ಭೇಟಿ ನೀಡುತ್ತಿದೆ. ಶನಿವಾರ ಬೆಳಗ್ಗೆ ಸಚಿವರಾದ ರಮೇಶ ಜಾರಕಿಹೊಳಿ ಮತ್ತು ಕೆ.ಎಸ್. ಈಶ್ವರಪ್ಪ ಹಾಗೂ ಎನ್ ನಾಗೇಶ್ ಅವರು ಸ್ಥಳಕ್ಕೆ ಭೇಟಿ ನೀಡಿ ಸಂಗೊಳ್ಳಿ ರಾಯಣ್ಣ ಹಾಗೂ ಶಿವಾಜಿ ಮಹಾರಾಜರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ವಿಚಾರವಾಗಿ ಕಳೆದೊಂದು ವಾರದಿಂದ ರಾಜ್ಯದ ಗಮನ ಸೆಳೆದಿತ್ತು. ಬೆಂಗಳೂರು ಸೇರಿ ರಾಜ್ಯದ ಎಲ್ಲಡೆಯಿಂದ ರಾಯಣ್ಣ ಅಭಿಮಾನಿಗಳು ಬೆಳಗಾವಿ ಚಲೋ ಅಭಿಯಾನದ ಮೂಲಕ ವಿವಾದಿತ ಸ್ಥಳದಲ್ಲಿಯೇ ಪ್ರತಿಮೆ ಸ್ಥಾಪಿಸಲು ಪಟ್ಟು ಹಿಡಿದಿದ್ದರು. ಶುಕ್ರವಾರ ರಾತ್ರೋರಾತ್ರಿ ಪ್ರತಿಮೆ ಸ್ಥಾಪಿಸಿದ್ದರು.
ವಿವಾದ ತಾರಕಕ್ಕೇರಿದ ಬಳಿಕ ಎಡಿಜಿಪಿ ಅಮರಕುಮಾರ್ ಪಾಂಡೆ ಬೆಳಗಾವಿಗೆ ಭೇಟಿ ನೀಡಿದ್ದರು. ಜಿಲ್ಲಾಧಿಕಾರಿ ಮತ್ತು ಸಮುದಾಯ ಮುಖಂಡರ ಜತೆ ಸಂಧಾನ ಸಭೆ ನಡೆಸಿ ಸಫಲರಾಗಿದ್ದರು. ಪ್ರಕರಣ ಸುಖಾಂತ್ಯ ಕಂಡಿದೆ. ಸಚಿವ ಕೆ.ಎಸ್. ಈಶ್ವರಪ್ಪ ಬೆಳಗಾವಿಗೆ ಭೇಟಿ ನೀಡಿದ್ದು, ರಾಯಣ್ಣ ಪ್ರತಿಮೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಿಧಾನಸಭೆಯ ಉಪ ಸಭಾಪತಿ ಆನಂದ ಮಾಮನಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.