ದಿ ವೈರ್ ಸುದ್ದಿ ಮಾಧ್ಯಮದ ಪ್ರಕಾಶಕರು, ಸಂಪಾದಕರು ಮತ್ತು ಅಲ್ಲಿರುವ ಕೆಲವು ಬರಹಗಾರರ ವಿರುದ್ಧ ತೆಲಂಗಾಣ ಕೋರ್ಟ್ವೊಂದರಲ್ಲಿ ಭಾರತ್ ಬಯೋಟೆಕ್ ಔಷಧೀಯ ಕಂಪನಿ 100 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದೆ. ಭಾರತ್ ಬಯೋಟೆಕ್ (Bharat Biotech) ಅಭಿವೃದ್ಧಿ ಪಡಿಸಿದ ಕೊವ್ಯಾಕ್ಸಿನ್ ಕೊವಿಡ್ 19 ಲಸಿಕೆ (covaxin) ಬಗ್ಗೆ ಅವಹೇಳನಕಾರಿ ಸುದ್ದಿಗಳನ್ನು ಬರೆದು, ಪ್ರಕಟಿಸಿದ ಆರೋಪದಡಿ ಈ ಮಾನನಷ್ಟ ಮೊಕದ್ದಮೆಯನ್ನು ಹಾಕಿದ್ದಾಗಿ ಕಂಪನಿ ಹೇಳಿಕೊಂಡಿದೆ. ತೆಲಂಗಾಣದ ರಂಗಾರೆಡ್ಡಿ ಕೋರ್ಟ್ನಲ್ಲಿ ಕೇಸ್ ದಾಖಲಾಗಿದ್ದು, XVI ನೇ ಹೆಚ್ಚುವರಿ ನ್ಯಾಯಾಧೀಶರು ವಿಚಾರಣೆ ನಡೆಸಿದ್ದು, ಭಾರತ್ ಬಯೋಟೆಕ್ ವಿರುದ್ಧ ಪ್ರಕಟಿಸಿದ್ದ 14 ಲೇಖನಗಳನ್ನೂ ತೆಗೆದುಹಾಕಲು ದಿ ವೈರ್ ಸುದ್ದಿ ತಾಣಕ್ಕೆ ಸೂಚನೆ ನೀಡಿದ್ದಾರೆ.
