ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಆಡಳಿತದಲ್ಲಿ ಅತಿ ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿ ಕಲ್ಪಿಸಿಕೊಡಬೇಕು ಮತ್ತು ಕಾಂತರಾಜು ವರದಿಯನ್ನು ತಕ್ಷಣ ಸರ್ಕಾರ ಜಾರಿಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಅಧ್ಯಕ್ಷರಾದ ಎಮ್.ಸಿ.ವೇಣುಗೋಪಾಲ್ ನೇತೃತ್ವದ ನಿಯೋಗ ನಿನ್ನೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ.
ಮನವಿ ಸಲ್ಲಿಸಿದ ನಂತರ ಈ ಕುರಿತು ಎಮ್.ಸಿ.ವೇಣುಗೋಪಾಲ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ರಾಜ್ಯಪಾಲರು ನಮ್ಮ ಮನವಿಗೆ ಧನಾತ್ಮಕವಾಗಿ ಸ್ಪಂದಿಸಿದ್ದಾರೆ. ರಾಜ್ಯದ ಅತಿ ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿ ಕಲ್ಪಿಸಿ ಅವರನ್ನು ಮುಖ್ಯವಾಹಿನಿಗೆ ತರುವ ಕುರಿತಾಗಿ ಘನತೆವೆತ್ತ ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಛ ನ್ಯಾಯಾಲಯ ಅನೇಕ ಬಾರಿ ಉಲ್ಲೇಖಿಸಿದೆ. ಆದರೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ಶಾಸನಸಭೆ ಮತ್ತು ಸಂಸತ್ತಿನಲ್ಲಿ ಅತಿ ಹಿಂದುಳಿದ ಸಮುದಾಯಗಳಿಗೆ ಮೀಸಲಾತಿಯಲ್ಲಿ ಅನ್ಯಾಯವಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.