ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರನ್ನು ವಸತಿ ಸಚಿವ ವಿ ಸೋಮಣ್ಣ ಸುಡುಗಾಡು ಸಿದ್ಧ ಎಂದು ಸಂಬೋಧಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕರು ಇಂದು ಪ್ರತಿಭಟನೆ ನಡೆಸಿದರು.
ಮಾಗಡಿರಸ್ತೆಯ ಟೋಲ್ಗೇಟ್ ವೃತ್ತದ ಶನೇಶ್ವರ ದೇವಸ್ಥಾನ ಮುಂಭಾಗ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿ ಸಚಿವ ಸೋಮಣ್ಣ ಪ್ರತಿಕೃತಿ ದಹಿಸಿದ್ದಾರೆ. ಫೆ.12ರಂದು ಮೈಸೂರಿನಲ್ಲಿ ಸಂಸದ ನಿವಾಸ್ ಪ್ರಸಾದ್ ಅವರ ಮನೆಗೆ ಭೇಟಿ ನೀಡಿದಾಗ ಸೋಮಣ್ಣ ಅವರು ಸಿದ್ದರಾಮಯ್ಯ ಅವರನ್ನು ಸುಡುಗಾಡು ಸಿದ್ಧ ಎಂಬ ಹೇಳಿಕೆ ನೀಡಿದ್ದರು ಎನ್ನಲಾಗ್ತಿದೆ. ಗೋವಿಂದರಾಜನಗರ, ವಿಜಯನಗರ ಬೆಂಗಳೂರು ನಗರದ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮಾಡಿ ಸಚಿವ ಸೋಮಣ್ಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ದಿನಕ್ಕೊಬ್ಬ ಬಿಜೆಪಿ ಮುಖಂಡರು ಕಾಂಗ್ರೆಸ್ ನಾಯಕರನ್ನ ಅವಹೇಳನ ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಗೌರವ ನೀಡುತ್ತಿಲ್ಲ. ಮಾಜಿ ಸಿಎಂ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತ್ರವಲ್ಲದೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ಸೇರಿದಂತೆ ಹಲವು ನಾಯಕರ ವಿರುದ್ಧ ಅವಹೇಳನಕಾರಿ ಮಾತುಗಳನ್ನು ಅವರು ಆಡುತ್ತಿದ್ದಾರೆ. ಹಾಗಾಗಿ ಅವರ ವಿರುದ್ಧ ಕಠಿಣ ಹೋರಾಟ ಕೈಗೊಳ್ಳಬೇಕು ಎಂದು ಕರೆಕೊಟ್ಟರು.