ಶಿವಮೊಗ್ಗ: ಹಿಜಾಬ್-ಕೇಸರಿ ಶಾಲು ವಿವಾದದ ಪರಿಣಾಮ ರಾಜ್ಯದಲ್ಲಿ ಅಸ್ಥಿರತೆ, ಅಶಾಂತಿ ನಿರ್ಮಾಣವಾಗಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಕಾಂಗ್ರೆಸ್ ವಕ್ತಾರ ವಿ.ಎಸ್. ಉಗ್ರಪ್ಪ ಪ್ರತಿಪಾದಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿ, ‘ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದ ಭಾಷಣವನ್ನು ರಾಜ್ಯಪಾಲರಿಂದ ಮಾಡಿಸಿದ್ದಾರೆ.
ಸರ್ಕಾರಗಳ ಹಿನ್ನೋಟ, ಮುನ್ನೋಟವನ್ನು ಜನರ ಮುಂದೆ ಇಡಬೇಕಿತ್ತು. ಅದು ರಾಜ್ಯಪಾಲರ ಭಾಷಣದಲ್ಲಿ ಅಡಕವಾಗಿರಬೇಕು. ರಾಜ್ಯಪಾಲರ ಭಾಷಣ ಒಂದು ರೀತಿ ‘ಓಲ್ಡ್ ವೈನ್ ಇನ್ ನ್ಯೂ ಬಾಟಲ್’ ಎನ್ನುವಂತಿದೆ’ ಎಂದು ಟೀಕಿಸಿದರು.
ರಾಜ್ಯದ ರೈತರ, ಹಿಂದುಳಿದ ವರ್ಗಗಳ ಸಮಸ್ಯೆ, ನದಿಗಳ ಜೋಡಣೆ ವಿಚಾರ ಸೇರಿ ಯಾವುದೇ ಪ್ರಸ್ತಾಪ ಮಾಡಿಲ್ಲ. ನೀರಾವರಿ ವಿಚಾರಗಳ ಪ್ರಸ್ತಾಪವೇ ಆಗಿಲ್ಲ. ಯಾವ ಪುರುಷಾರ್ಥಕ್ಕೆ ರಾಜ್ಯಪಾಲರಿಂದ ಭಾಷಣ ಮಾಡಿದ್ದಾರೆ ಎಂದರು.
ಸಂವಿಧಾನದ 243 ಆರ್ಟಿಕಲ್ ಪ್ರಕಾರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಿಲ್ಲಿಸಬಾರದು. ಸಚಿವ ಈಶ್ವರಪ್ಪ ಅವರಿಗೆ ಸಂವಿಧಾನ ವಿಚಾರ ಅರ್ಥ ಆಗುವುದಿಲ್ಲ. ತಕ್ಷಣ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳಿಗೆ ಚುನಾವಣೆ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ಇಬ್ರಾಹಿಂ ವಿರುದ್ಧ ವಾಗ್ದಾಳಿ: ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಅವರು ವಕ್ಫ್ ಆಸ್ತಿ ಕಬಳಿಕೆ ವಿಚಾರದಲ್ಲಿ ಧಮ್ ಇದ್ದರೆ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.
‘ನನ್ನ ಗಂಡಸುತನ ಏನು ಎನ್ನುವುದು ಯಾರಿಗೆ ಗೊತ್ತಿದೆಯೋ ಇಲ್ಲವೋ ಅವರಿಗೆ ತಿಳಿದಿದೆ. ಮನುಷ್ಯನ ವ್ಯಕ್ತಿತ್ವವನ್ನು ಆತನ ಭಾಷೆ ತಿಳಿಸುತ್ತದೆ. ನನ್ನನ್ನು ನಾಯಿಗೆ ಹೋಲಿಸಿದ್ದಾರೆ. ನಾಯಿಗೆ ಇರುವ ನಿಷ್ಠೆ ಇಬ್ರಾಹಿಂಗೆ ಇಲ್ಲ’ ಎಂದರು.
Laxmi News 24×7