ಬೆಂಗಳೂರು: ಸಿಎಂ ಆಗಲೇಬೇಕು ಎಂಬ ಹಠಕ್ಕೆ ಬಿದ್ದಂತಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಜ್ಯೋತಿಷ್ಯದ ಮೊರೆ ಹೋಗಿದ್ದು, ಕಚೇರಿಯಲ್ಲಿ ಓಡಾಡಲು ಪ್ರತ್ಯೇಕ ಬಾಗಿಲನ್ನೇ ನಿರ್ಮಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಸಿಎಂ ಆಗಲು ಕಚೇರಿ ಹಾಗೂ ಅಧಿಕೃತ ನಿವಾಸ ಕಚೇರಿಯನ್ನು ಶ್ವೇತ ವರ್ಣಕ್ಕೆ ಬದಲಿಸಲು ಮುಂದಾಗಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿಯ ಪಟ್ಟಕ್ಕೇರಲು ಜ್ಯೋತಿಷಿಗಳ ಸಲಹೆಯಂತೆ ಕಾಂಗ್ರೆಸ್ ಕಚೇರಿಯಲ್ಲಿ ಓಡಾಡಲು ಕುಬೇರ ಮೂಲೆಯಲ್ಲಿ ಹೊಸ ಬಾಗಿಲನ್ನೇ ನಿರ್ಮಿಸಿದ್ದಾರೆ. ಅಲ್ಲದೇ ಪಕ್ಷದ ಕಚೇರಿಗೆ ಪ್ಯಾಲೇಸ್ ಲುಕ್ ನೀಡಲಾಗುತ್ತದೆ. ಈಗಾಗಲೇ ಕೆಪಿಸಿಸಿ ಹಳೆಯ ಕಟ್ಟಡಕ್ಕೆ ಹೊಸ ಲುಕ್ ನೀಡಲಾಗುತ್ತಿದೆ. ಕಚೇರಿ ಮುಂದೇ ಹೊಸ ಪಿಲ್ಲರ್ ಗಳನ್ನು ಅಳವಡಿಸಲಾಗುತ್ತಿದೆ. ಅಲ್ಲದೇ ಹೆಚ್ಚುವರಿ ಮೆಟ್ಟಿಲು, ಕುಬೇರ ಮೂಲೆಯಲ್ಲಿದ್ದ ಕೊಠಡಿಯ ಕಿಟಕಿಯನ್ನು ತೆಗೆದು ಬಾಗಿಲನ್ನಿಡುವ ಕಾರ್ಯ ನಡೆಯುತ್ತಿದೆ.
ಡಿಕೆ ಶಿವಕುಮಾರ್ ದೈವದ ಮೇಲೆ ಅಪಾರ ನಂಬಿಕೆಯನ್ನು ಇಟ್ಟಿದ್ದಾರೆ. ಅವರಿಗೆ ಸಲಹೆ ನೀಡಿರುವ ಜ್ಯೋತಿಷಿಗಳು, ನಿಮಗೆ ಸಿಎಂ ಯೋಗ ಇದೆ. ಆದರೆ ಖುರ್ಚಿ ಏರಲು ಶ್ವೇತ ವರ್ಣ ಅಗತ್ಯ. ನಿಮ್ಮ ಮನೆ ಅಷ್ಟೇ ಅಲ್ಲ, ಪಕ್ಷದ ಕಚೇರಿಗೂ ಶ್ವೇತ ವರ್ಣದಂತೆ ಮಾಡಿ ಎಂದು ಸಲಹೆ ನೀಡಿದ್ದಾರೆ. ರಾಜಯೋಗಕ್ಕಾಗಿ ಡಿಕೆಶಿ ಜ್ಯೋತಿಷಿ ಮಾತು ಪಾಲಿಸುತ್ತಿದ್ದಾರೆ ಎಂಬ ಮಾತು ಕೇಳಿಬಂದಿದೆ.
ಕೇವಲ ರಾಜ್ಯ ಕಾಂಗ್ರೆಸ್ ಕೆಪಿಸಿಸಿ ಕಚೇರಿ ಮಾತ್ರವಲ್ಲದೇ ಡಿಕೆಶಿ ಅವರ ನಿವಾಸಕ್ಕೂ ಶ್ವೇತ ವರ್ಣಮಯ ಮಾಡಲಾಗುತ್ತದೆ ಎಂಬ ಮಾಹಿತಿ ಲಭಿಸಿದೆ. ಶೀಘ್ರವೇ ಮನೆಯ ನವೀಕರಣ ಕಾರ್ಯ ಕೂಡ ಶುರುವಾಗಲಿದೆ ಎನ್ನಲಾಗಿದೆ. ಡಿಕೆಶಿಗೆ ಈ ವೈಟ್ ಹೌಸ್, ಕುಬೇರ ಮೂಲೆ ರಾಜದ್ವಾರವೂ ರಾಜಯೋಗವನ್ನು ತಂದುಕೊಡುತ್ತಾ? ಅಧಿಕಾರದ ಯೋಗ ಸಿಗುತ್ತಾ ಎಂಬ ಪ್ರಶ್ನೆಗಳಿಗೆ ಮುಂದಿನ ಚುನಾವಣೆಯಲ್ಲಿ ಉತ್ತರ ಸಿಗಲಿದೆ.