ಬೆಂಗಳೂರು: ಪುನೀತ್ ರಾಜ್ಕುಮಾರ್ ನಟನೆಯ ಕೊನೇ ಚಿತ್ರ ಜೇಮ್ಸ್ ಮಾರ್ಚ್ 17 ಅಪ್ಪು ಬರ್ತಡೆ ಪ್ರಯುಕ್ತ ಬಿಡುಗಡೆಗೆ ಸಿದ್ದವಾಗಿದೆ. ಈ ಸಿನಿಮಾಗೆ ಡಬ್ಬಿಂಗ್ ಮಾಡುವ ಮುನ್ನವೇ ಪುನೀತ್ ರಾಜ್ಕುಮಾರ್ ನಮ್ಮನ್ನ ಅಗಲಿದ್ರು. ಹಾಗಾಗಿ ಸಿನಿಮಾಗೆ ಡಬ್ಬಿಂಗ್ ಮಾಡೋದು ಹೇಗೆ ಅನ್ನೋದು ದೊಡ್ಡ ಸಮಸ್ಯೆ ಆಗಿ ಪರಿಣಮಿಸಿತ್ತು.
ಆರಂಭದಲ್ಲಿ ಶಿವರಾಜ್ಕುಮಾರ್ ಸಿನಿಮಾಗೆ ಡಬ್ ಮಾಡ್ತಾರೆ ಅನ್ನೋ ಸುದ್ದಿಗಳು ಕೇಳಿಬಂದಿತ್ತಾದರೂ ಪುನೀತ್ ಅವರ ವಾಯ್ಸೇ ಇದ್ರೆ ಉತ್ತಮ ಅಂತಾ ಜೇಮ್ಸ್ ಚಿತ್ರ ತಂಡ ಸಾಕಷ್ಟು ಪ್ರಯತ್ನ ಪಟ್ಟಿತ್ತು. ಅದಕ್ಕಾಗಿ ಶೂಟಿಂಗ್ ವೇಳೆ ಮಾತಾಡಿದ ವಾಯ್ಸನ್ನೇ ಸಿನಿಮಾದಲ್ಲಿ ಬಳಸಲು ಅದರ ಸ್ಯಾಂಪಲ್ ವಿದೇಶಕ್ಕೂ ಕಳಿಸಲಾಗಿತ್ತು. ಆದರೆ ಅದು ಸಾಧ್ಯವಾಗದ ಕಾರಣ ಸಿನಿಮಾಗೆ ಶಿವಣ್ಣ ಅವರಿಂದ ವಾಯ್ಸ್ ಡಬ್ ಮಾಡಿಸಲಾಗಿದೆ.
ಆದರೆ ಪ್ರತಿಯೊಬ್ಬ ಕನ್ನಡಿಗರಿಗೂ ಅಪ್ಪು ವಾಯ್ಸ್ ಚೆನ್ನಾಗಿ ಗೊತ್ತಿರೋದ್ರಿಂದ ಸಿನಿಮಾದಲ್ಲಿ ಅವರ ಪಾತ್ರಕ್ಕೆ ಬೇರೆಯವರ ವಾಯ್ಸ್ ಇದ್ದಾಗ ಅದನ್ನ ಜೀರ್ಣಿಸಿಕೊಳ್ಳೋದು ಕಷ್ಟ. ಹಾಗಾಗಿ ಪುನೀತ್ ರೀತಿ ಮಾತಾಡುವ ಮಿಮಿಕ್ರಿ ಆರ್ಟಿಸ್ಟ್ಗಳಿಂದ ಡಬ್ ಮಾಡಿಸಬೇಕಿತ್ತು. ಆಗ ಪುನೀತ್ ಮಾತಾಡಿದ ರೀತಿಯೇ ಇರುತ್ತಿತ್ತು ಅಂತಾ ಅಭಿಮಾನಿಗಳು ಹೇಳುತ್ತಿದ್ದಾರೆ. ಶಿವಣ್ಣ ಮತ್ತು ಪುನೀತ್ ವಾಯ್ಸ್ ಎಲ್ಲರಿಗೂ ಗೊತ್ತಿರೋದ್ರಿಂದ ಸಿನಿಮಾದಲ್ಲಿ ಅದು ಸ್ಪಷ್ಟವಾಗಿ ಗೊತ್ತಾಗಲಿದೆ. ಇದು ಸಹಜವಾಗಿಯೇ ಪುನೀತ್ ಅಭಿಮಾನಿಗಳಿಗೆ ಬೇಸರ ತರಿಸಿದೆ.