ಕಳೆದ ವರ್ಷದ ಆರಂಭದಲ್ಲಿ ಏಕದಿನ, ಟಿ ಟ್ವೆಂಟಿ ಹಾಗೂ ಟೆಸ್ಟ್ ಈ ಮೂರೂ ಮಾದರಿಯ ಕ್ರಿಕೆಟ್‍ನಲ್ಲಿಯೂ ಟೀಮ್ ಇಂಡಿಯಾವನ್ನು ನಾಯಕನಾಗಿ ಮುನ್ನಡೆಸುತ್ತಿದ್ದ ವಿರಾಟ್ ಕೊಹ್ಲಿ ಈ ವರ್ಷದ ಜನವರಿ ತಿಂಗಳಿನಲ್ಲಿ ಈ ಎಲ್ಲಾ ತಂಡಗಳ ನಾಯಕತ್ವವನ್ನು ಕಳೆದುಕೊಂಡು ಸದ್ಯ ತಂಡದಲ್ಲಿ ಓರ್ವ ಆಟಗಾರನಾಗಿ ಮಾತ್ರ ಉಳಿದುಕೊಂಡಿದ್ದಾರೆ.
ಹೌದು, ಮೊದಲಿಗೆ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವದಿಂದ ಸ್ವಇಚ್ಛೆಯಿಂದ ಕೆಳಗಿಳಿದ ವಿರಾಟ್ ಕೊಹ್ಲಿ ಅವರನ್ನು ಬಿಸಿಸಿಐ ಭಾರತ ಏಕದಿನ ತಂಡದ ನಾಯಕತ್ವದಿಂದ ತೆಗೆದು ಹಾಕಿತ್ತು.
ಹೀಗೆ ಭಾರತ ಏಕದಿನ ಹಾಗೂ ಟಿ ಟ್ವೆಂಟಿ ತಂಡಗಳ ನಾಯಕತ್ವವನ್ನು ಕಳೆದುಕೊಂಡಿದ್ದ ವಿರಾಟ್ ಕೊಹ್ಲಿ ಇತ್ತೀಚೆಗಷ್ಟೇ ಮುಕ್ತಾಯವಾದ ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿ ನಂತರ ಭಾರತ ಟೆಸ್ಟ್ ತಂಡದ ನಾಯಕತ್ವವನ್ನು ಕೂಡ ತ್ಯಜಿಸಿದ್ದಾರೆ. ಇನ್ನು ವಿರಾಟ್ ಕೊಹ್ಲಿ ಭಾರತ ಟಿ ಟ್ವೆಂಟಿ ಹಾಗೂ ಏಕದಿನ ತಂಡದ ನಾಯಕತ್ವದಿಂದ ಹೊರಬಿದ್ದ ನಂತರ ಕೊಹ್ಲಿ ಜಾಗಕ್ಕೆ ರೋಹಿತ್ ಶರ್ಮಾ ಅವರನ್ನು ನೂತನ ನಾಯಕನನ್ನಾಗಿ ಬಿಸಿಸಿಐ ನೇಮಿಸಿತ್ತು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದಲೇ ರೋಹಿತ್ ಶರ್ಮಾ ಭಾರತ ಏಕದಿನ ತಂಡದ ಪೂರ್ಣಾವಧಿ ನಾಯಕನಾಗಿ ಕಣಕ್ಕಿಳಿಯಬೇಕಿತ್ತು.