ನವದೆಹಲಿ: ದಕ್ಷಿಣ ಆಫ್ರಿಕಾ ಪ್ರವಾಸದ ಮೊದಲ ಟೆಸ್ಟ್ ಗೆದ್ದರೂ, ಸರಣಿ ಗೆಲುವಿನ ಅಪೂರ್ವ ಅವಕಾಶ ಕೈಚೆಲ್ಲಿದ ಭಾರತ ತಂಡಕ್ಕೆ ಶನಿವಾರ ಸಂಜೆ ಮತ್ತೊಂದು ಆಘಾತ ಎದುರಾಯಿತು. ವಿರಾಟ್ ಕೊಹ್ಲಿ ಟೆಸ್ಟ್ ತಂಡದ ನಾಯಕತ್ವವನ್ನೂ ತ್ಯಜಿಸುವ ಮೂಲಕ ಕ್ರಿಕೆಟ್ ವಲಯದಲ್ಲಿ ಅಚ್ಚರಿ-ಆಘಾತ ಮೂಡಿಸಿದ್ದಾರೆ.
ಟೆಸ್ಟ್ ನಾಯಕರಾಗಿ ಇನ್ನಷ್ಟು ಸಮಯ ಮುಂದುವರಿಯುವ ಒಲವು ಹೊಂದಿದ್ದ 33 ವರ್ಷದ ಕೊಹ್ಲಿ ಅವರ ಈ ದಿಢೀರ್ ನಿರ್ಧಾರದ ಹಿಂದಿನ ಕಾರಣ ಏನಿರಬಹುದು ಎಂಬ ಗೊಂದಲ ಅವರ ಅಭಿಮಾನಿಗಳಲ್ಲಿ ಮೂಡಿದೆ.
ವಿರಾಟ್ ಕೊಹ್ಲಿ ಟಿ20 ನಾಯಕತ್ವ ತ್ಯಜಿಸಿದ ಬಳಿಕ ಸೀಮಿತ ಓವರ್ ತಂಡಕ್ಕೆ ಒಬ್ಬನೇ ನಾಯಕನಿರಲಿ ಎಂದು ಬಿಸಿಸಿಐ ರೋಹಿತ್ ಶರ್ಮರನ್ನು ನೇಮಿಸಿತು. ಆದರೆ ಈ ಬಗ್ಗೆ ತಮಗೆ ಬಿಸಿಸಿಐ ಅಥವಾ ಆಯ್ಕೆಗಾರರು ಮೊದಲೇ ಮಾಹಿತಿ ನೀಡಿರಲಿಲ್ಲ ನೀಡಿರಲಿಲ್ಲ ಎಂದು ಕೊಹ್ಲಿ, ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿಗೆ ವ್ಯತಿರಿಕ್ತವಾದ ಹೇಳಿಕೆಯನ್ನು ನೀಡುವ ಮೂಲಕ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಮುನ್ನ ಭಾರಿ ದೊಡ್ಡ ಬಿರುಗಾಳಿ ಎಬ್ಬಿಸಿದ್ದರು.
ಈ ನಡುವೆ ಸೀಮಿತ ಓವರ್ ತಂಡದ ನಾಯಕ ರೋಹಿತ್ ಶರ್ಮ ಜತೆ ಮನಸ್ತಾಪ ಮೂಡಿರುವ ಬಗ್ಗೆಯೂ ವರದಿಯಾಯಿತು. ಇದನ್ನು ಕೊಹ್ಲಿ ನಿರಾಕರಿಸಿದರೂ, ರೋಹಿತ್ ಫಿಟ್ನೆಸ್ ನೆಪ ನೀಡಿ ಕೊನೇಕ್ಷಣದಲ್ಲಿ ಪ್ರವಾಸ ತಪ್ಪಿಸಿದ್ದು ಮತ್ತಷ್ಟು ಅನುಮಾನ ಮೂಡಿಸಿತ್ತು. ಇದಲ್ಲದೆ ಆಯ್ಕೆ ಸಮಿತಿ ಅಧ್ಯಕ್ಷ ಚೇತನ್ ಶರ್ಮ ಕೂಡ ಗಂಗೂಲಿ ಪರವಾಗಿ ಮಾತನಾಡಿ, ಕೊಹ್ಲಿಗೆ ಟಿ20 ನಾಯಕತ್ವ ತ್ಯಜಿಸದಂತೆ ಮನವಿ ಮಾಡಿಕೊಂಡಿದ್ದೆವು ಎಂದಿದ್ದರು. ಇದರಿಂದ ಸಾಕಷ್ಟು ಇರಿಸುಮುರಿಸು ಎದುರಿಸಿದ್ದ ಕೊಹ್ಲಿ, ಬಿಸಿಸಿಐ ಅಧಿಕಾರಿಗಳ ಕೆಂಗಣ್ಣಿಗೂ ಗುರಿಯಾಗಿದ್ದಾರೆ.