ಬೆಂಗಳೂರು,ಆ.25- ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆಗೆ ಕೇಂದ್ರ ವರಿಷ್ಠರು ರೆಡ್ ಸಿಗ್ನಲ್ ಕೊಟ್ಟಿದ್ದು, ಅವೇಶನ ಆರಂಭದೊಳಗೆ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಆಕಾಂಕ್ಷಿಗಳ ಆಸೆಗೆ ತಣ್ಣೀರೆರಚಿದೆ.
ಖಾಲಿ ಇರುವ 6 ಸ್ಥಾನಕ್ಕೆ ಆಕಾಂಕ್ಷಿಗಳ ಪಟ್ಟಿ ಹನುಮಂತನ ಬಾಲದಂತೆ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಅಲ್ಲದೆ ಅವೇಶನಕ್ಕೂ ಮುನ್ನವೇ ಸಂಪುಟ ವಿಸ್ತರಣೆ ಮಾಡಿದರೆ ಶಾಸಕರು ಮುನಿಸಿಕೊಳ್ಳಬಹುದೆಂಬ ಕಾರಣಕ್ಕಾಗಿ ತಾತ್ಕಾಲಿಕವಾಗಿ ಮುಂದೂಡಲಾಗಿದೆ.
ಎಲ್ಲವೂ ನಿರೀಕ್ಷೆಯಂತೆ ನಡೆದಿದ್ದರೆ ಸೆಪ್ಟೆಂಬರ್ 21ರಿಂದ ಆರಂಭವಾಗಲಿರುವ ಮಳೆಗಾಲದ ಅವೇಶನಕ್ಕೂ ಮುನ್ನವೇ ಸಂಪುಟ ವಿಸ್ತರಣೆಯಾಗುತಿತ್ತು. ಮಾಜಿ ಸಚಿವರಾದ ಉಮೇಶ್ ಕತ್ತಿ, ಎಂಟಿಬಿ ನಾಗರಾಜ್ ಹಾಗೂ ಆರ್.ಶಂಕರ್‍ಗೆ ಮಾತ್ರ ಸಚಿವ ಸ್ಥಾನ ನೀಡಿ ಉಳಿದ ಮೂರು ಸ್ಥಾನಗಳನ್ನು ಉಳಿಸಿಕೊಳ್ಳುವ ಲೆಕ್ಕಾಚಾರ ಮುಖ್ಯಮಂತ್ರಿ ಯಡಿಯೂರಪ್ಪನವರದ್ದಾಗಿತ್ತು.
ಆದರೆ ಇರುವ 6 ಸ್ಥಾನಗಳಿಗೆ ಎರಡು ಡಜನ್‍ಗೂ ಅಕ ಶಾಸಕರು ಆಕಾಂಕ್ಷಿಗಳಾಗಿರುವುದರಿಂದ ಯಾರಿಗೇ ಕೊಟ್ಟರೂ ಭಿನ್ನಮತಕ್ಕೆ ಅವಕಾಶ ನೀಡಿದಂತಾಗುತ್ತದೆ. ಅವೇಶನದಲ್ಲಿ ಪ್ರತಿಪಕ್ಷಗಳ ಮುಂದೆ ಮುಖಭಂಗವಾಗುತ್ತದೆ ಎಂಬ ಕಾರಣಕ್ಕಾಗಿ ಮುಂದೂಡಲಾಗಿದೆ.