ಲಂಡನ್: ವಿಶ್ವದ ಅತೀ ವೇಗದ ಓಟಗಾರ, ಒಲಿಂಪಿಕ್‍ನಲ್ಲಿ 8 ಬಾರಿ ಚಿನ್ನದ ಪದಕ ತನ್ನದಾಗಿಸಿಕೊಂಡಿರುವ ಉಸೈನ್ ಬೋಲ್ಟ್‌ಗೆ ತನ್ನ 34ನೇ ಹುಟ್ಟುಹಬ್ಬ ಆಚರಿಸಿಕೊಂಡ ಕೆಲವೇ ದಿನಗಳ ಬಳಿಕ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿದೆ.
ಈ ಕುರಿತು ಸ್ವತಃ ಬೋಲ್ಟ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದು, ಎಲ್ಲರಿಗೂ ಶುಭೋದಯ, ನನಗೆ ಕೊರೊನಾ ಸೋಂಕು ತಗುಲಿರುವುದು ಖಚಿತವಾಗಿದೆ. ಶನಿವಾರ ನಾನು ಪರೀಕ್ಷೆ ಮಾಡಿಸಿದ್ದೆ. ಹೀಗಾಗಿ ಮನೆಯಲ್ಲೇ ಐಸೋಲೇಶನ್‍ಗೆ ಒಳಗಾಗಿದ್ದೇನೆ. ನನಗೆ ಯಾವುದೇ ರೀತಿಯ ರೋಗ ಲಕ್ಷಣಗಳಿಲ್ಲ. ಆದರೆ ಸುರಕ್ಷತೆ ದೃಷ್ಟಿಯಿಂದ ನನ್ನ ಸ್ನೇಹಿತರಿಂದ ದೂರವಿದ್ದೇನೆ. ಸೆಲ್ಫ್ ಕ್ವಾರಂಟೈನ್‍ಗೆ ಒಳಗಾಗಿದ್ದೇನೆ ಎಂದಿದ್ದಾರೆ.
ಅಲ್ಲದೆ ಆರೋಗ್ಯ ಸಚಿವಾಲಯದ ನಿಯಮದ ಪ್ರಕಾರ ನಾನು ಹೇಗೆ ಇತರರಿಂದ ದೂರ ಇರಬಹುದು ಎಂಬುದನ್ನು ತಿಳಿಯುತ್ತೇನೆ. ಸದ್ಯ ಸುರಕ್ಷತೆ ದೃಷ್ಟಿಯಿಂದ ನಾನು ಪ್ರತ್ಯೇಕವಾಗಿದ್ದೇನೆ. ಅಲ್ಲದೆ ಕೊರೊನಾ ವೈರಸ್‍ನ್ನು ಸುಲಭವಾಗಿ ತೆಗೆದುಕೊಂಡಿದ್ದೇನೆ. ನೀವು ಸುರಕ್ಷಿತವಾಗಿರಿ, ಆಲ್‍ರೈಟ್ ಕೂಲ್ ಎಂದು ಟ್ವಿಟ್ಟರ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ಉಸೈನ್ ಬೋಲ್ಟ್ 34ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಸ್ನೇಹಿತರೊಂದಿಗೆ ಭರ್ಜರಿ ಪಾರ್ಟಿ ಮಾಡಿದ್ದಾರೆ. ಇದರಲ್ಲಿ ದಕ್ಷಿಣ ಆಪ್ರಿಕಾ ಕ್ರಿಕೆಟ್ ಆಟಗಾರ ಕ್ರಿಸ್ ಗೇಲ್, ಫುಟ್‍ಬಾಲ್ ಆಟಗಾರ ರಹೀಮ್ ಸ್ಟೆರ್ಲಿಂಗ್ ಸೇರಿದಂತೆ ಹಲವು ಗಣ್ಯರು ಸಹ ಭಾಗಿಯಾಗಿದ್ದರು. ಪಾರ್ಟಿ ವೇಳೆ ಗಣ್ಯರು ಕುಣಿದು ಕುಪ್ಪಳಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು ಎಂದು ವರದಿಯಾಗಿದೆ.