ಕೋಲಾರ: ಮುಂದಿನ ನಾಲ್ಕು ತಿಂಗಳಲ್ಲಿ ಬಯಲುಸೀಮೆ ಕೋಲಾರ ಜನರ ದಾಹ ನೀಗಲಿದೆ. ಯರಗೋಳ್ ಯೋಜನೆ ಮೂಲಕ 4 ನಗರಗಳಿಗೆ ಕುಡಿಯುವ ನೀರು ಲಭ್ಯವಾಗಲಿದೆ.ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಯರಗೋಳ್ ಗ್ರಾಮದಲ್ಲಿ ಬೃಹದಾಕಾರವಾಗಿ ಆಣೆಕಟ್ಟು ತಲೆ ಎತ್ತಿದೆ. ಕೋಲಾರ ಸೇರಿದಂತೆ ಮೂರು ತಾಲೂಕುಗಳಿಗೆ ಕುಡಿಯುವ ನೀರು ಒದಗಿಸಲು 2008 ರಲ್ಲಿ ಯರಗೋಳ್ ಯೋಜನೆ ಆರಂಭವಾಗಿತ್ತು.
ಕೋಲಾರ, ಬಂಗಾರಪೇಟೆ ಮತ್ತು ಮಾಲೂರು ಪಟ್ಟಣಗಳಿಗೆ ಹಾಗೂ 45 ಇನ್ನಿತರ ಗ್ರಾಮಗಳಿಗೆ ಕುಡಿಯುವ ನೀರನ್ನು ಒದಗಿಸಲು ಅಂದಿನ ಮುಖ್ಯಮಂತ್ರಿ ಧರಂಸಿಂಗ್ ಸರ್ಕಾರದಿಂದ 240 ಕೋಟಿ ವೆಚ್ಚದ ಡ್ಯಾಂ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ದೊರಕಿತ್ತು. ನಂತರ 2010 ರಿಂದ ಕಾಮಗಾರಿ ನಡೆದು ಸುದೀರ್ಘವಾದ ಸಮಯ ತೆಗೆದುಕೊಂಡು ಈಗ ಮುಕ್ತಾಯದ ಹಂತಕ್ಕೆ ಬಂದಿದೆ. ಇದು ಇನ್ನೂ ನಾಲ್ಕು ತಿಂಗಳಲ್ಲಿ ಪೂರ್ತಿಯಾಗಲಿದ್ದು, ಕನಸಿನ ಯೋಜನೆ ಸಕಾರಗೊಳ್ಳಲಿದೆ.
ಸುಮಾರು 240 ಕೋಟಿಗಳ ಬೃಹತ್ ವೆಚ್ಚದ ಡ್ಯಾಂ ನಿರ್ಮಾಣ ಮಾಡಿದರೂ ಸಹ ನೀರು ನಮಗೆ ಲಭ್ಯವಾಗಬಹುದೇ ಎಂಬ ಜಿಜ್ನಾಸೆ ಸಾರ್ವಜನಿಕರಲ್ಲಿ ಕಾಡುತ್ತಿದೆ. ಏಕೆಂದರೆ ಕೋಲಾರ ಜಿಲ್ಲೆಯಲ್ಲಿ ಮಳೆ ವಾಡಿಕೆಯಂತೆ ಸುರಿಯುವುದಿಲ್ಲ. ಇದು ಕಳೆದ ಎರಡು ದಶಕಗಳಿಂದ ಸಾಬೀತಾಗಿದೆ. ಆದರೂ ಸಹ ಛಲ ಬಿಡದೆ ಇಲ್ಲಿ ಅಣೆಕಟ್ಟು ನಿರ್ಮಾಣವೇನೋ ಈಗ ಸಂಪೂರ್ಣವಾಗಿದೆ. ಶೇಕಡ 90ರಷ್ಟು ನಿರ್ಮಾಣ ಕಾಮಗಾರಿ ಮುಗಿದು, ಜನವರಿ ತಿಂಗಳಲ್ಲಿ ಲೋಕಾರ್ಪಣೆಯಾಗಲಿದೆ.