ನಾಗ್ಪುರ (ಮಹಾರಾಷ್ಟ್ರ): ಇತ್ತೀಚೆಗೆ ಸಲಿಂಗಿಗಳ ಲಿವ್ ಇನ್ ರಿಲೇಷನ್‌ನಲ್ಲಿ ಇರುವುದು, ಮದುವೆಯಾಗುವುದು ಸಾಮಾನ್ಯ ಎನಿಸಿಬಿಟ್ಟಿದೆ. ಹಿಂದೊಮ್ಮೆ ತಾವು ಇಂಥವರು ಎಂದು ಹೇಳಿಕೊಳ್ಳಲು ಮುಜುಗರ ಪಟ್ಟುಕೊಳ್ಳುತ್ತಿದ್ದವರು, ಇದು ತಮ್ಮ ದೇಹದಲ್ಲಾಗುತ್ತಿರುವ ಬದಲಾವಣೆ, ತಮ್ಮದೇನೂ ತಪ್ಪಿಲ್ಲ ಎನ್ನುವ ವಾಸ್ತವಕ್ಕೆ ಬಂದಿದ್ದಾರೆ.
ನಿಸರ್ಗವೇ ತಮ್ಮ ದೇಹ ಪ್ರಕೃತಿಯನ್ನು ಈ ರೀತಿ ಮಾಡಿರುವಾಗ ತಮ್ಮದಲ್ಲದ ತಪ್ಪಿಗೆ ಏಕೆ ಮುಜುಗರ ಪಟ್ಟುಕೊಳ್ಳಬೇಕು ಎನ್ನುವುದು ಅವರ ವಾದ.
ಇದೇ ರೀತಿಯ ವಾದವನ್ನೇ ಮುಂದಿಟ್ಟು ಇದೀಗ ಇಬ್ಬರು ಮಹಿಳಾ ವೈದ್ಯರು ಮದುವೆಯಾಗುವ ತೀರ್ಮಾನಕ್ಕೆ ಬಂದಿದ್ದಾರೆ. ಮಹಾರಾಷ್ಟ್ರದ ನಾಗಪುರದ ನಿವಾಸಿಗಳಾಗಿರುವ ಡಾ.ಪರೊಮಿತಾ ಮುಖರ್ಜಿ ಮತ್ತು ಡಾ. ಸುರಭಿ ಮಿತ್ರ ಇವರು ದಾಂಪತ್ಯಕ್ಕೆ ಎಲ್ಲರ ಸಮ್ಮುಖದಲ್ಲಿ ಅಡಿ ಇಡಲು ಮುಂದಾಗಿದ್ದಾರೆ. ನಾಗ್ಪುರದಲ್ಲಿ ವಿವಾಹವಾಗಲಿರುವ ಇವರು, ಗೋವಾದಲ್ಲಿ ಹನಿಮೂನ್ ಮಾಡಲು ಇಚ್ಛೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಪರೊಮಿತಾ ಮುಖರ್ಜಿ, ‘ಇದರಲ್ಲಿ ತಪ್ಪೇನು ಎಂದು ನಮಗೆ ಅನ್ನಿಸುತ್ತಿಲ್ಲ. ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥಮಾಡಿಕೊಂಡಿದ್ದೇವೆ. ಇದನ್ನು ನಾವು ಜೀವಮಾನದ ಬದ್ಧತೆ ಎಂದು ಕರೆಯುತ್ತೇವೆ’ ಎಂದಿದ್ದಾರೆ. ಈ ಮದುವೆಗೆ ಮನೆಯವರ ಒಪ್ಪಿಗೆ ಇದೆಯೇ ಎಂದು ಕೇಳಿದಾಗ, 2013ರಲ್ಲಿ ನನ್ನ ದೇಹದಲ್ಲಿ ಬದಲಾವಣೆಯಾಯಿತು. ಅಂದರೆ ಸಾಮಾನ್ಯವಾಗಿ ವಯಸ್ಸಿಗೆ ಬರುತ್ತಿದ್ದಂತೆಯೇ ವಿರುದ್ಧ ಲಿಂಗಿಗಳ ಮೇಲೆ ಆಕರ್ಷಣೆ ಹೆಚ್ಚಾಗುತ್ತದೆ. ಆದರೆ ನನಗೆ ಹೆಣ್ಣುಮಕ್ಕಳ ಮೇಲೆಯೇ ಆಕರ್ಷಣೆ ಹೆಚ್ಚಾಗುವಂತೆ ಕಂಡಿತು. ಇದನ್ನು ನನ್ನ ತಂದೆಯ ಬಳಿಗೆ ಹೇಳಿದ್ದೆ. ಆದರೆ ಆಗ ತಾಯಿಗೆ ಈ ವಿಷಯ ತಿಳಿದಿರಲಿಲ್ಲ. ಇತ್ತೀಚೆಗೆ ನನ್ನ ತಾಯಿಗೆ ಹೇಳಿದಾಗ ಅವರು ಮೊದಲಿಗೆ ಶಾಕ್ಗೆ ಒಳಗಾದರೂ, ನಂತರ ಡಾ.ಸುರಭಿಯೊಂದು ಮದುವೆಗೆ ಒಪ್ಪಿದ್ದಾರೆ ಎಂದು ಹೇಳಿದ್ದಾರೆ.
Laxmi News 24×7