ಗೋಕಾಕ: ರೈತರ ದೂರಿನ ಹಿನ್ನೆಲೆಯಲ್ಲಿ ತಾಲೂಕಿನ ಮಮದಾಪುರ ಗ್ರಾಮದ ರಸಗೊಬ್ಬರ ಮಳಿಗೆಯೊಂದರ ಮೇಲೆ ಕೃಷಿ ಇಲಾಖೆಯ ಚಿಕ್ಕೊಡಿ ವಿಭಾಗದ ಉಪನಿರ್ದೇಶಕರ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿತು.
ಜಿಲ್ಲಾಧಿಕಾರಿಗಳಿಗೆ ರೈತರು ನೀಡಿದ್ದ ದೂರನನ್ವಯ ದಾಳಿ ನಡೆಸಿದ ಅಧಿಕಾರಿಗಳು, ಅಂಗಡಿಯ ದಾಸ್ತಾನು ಮತ್ತು ದಾಖಲೆಗಳನ್ನು ಪರಿಶೀಲನೆ ನಡೆಸಿದರು. ಯೂರಿಯಾ ಹಾಗೂ ರಸಗೊಬ್ಬರಗಳನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡುವುದು, ಪರವಾನಿಗೆ ಇಲ್ಲದ ರಸಗೊಬ್ಬರಗಳನ್ನು ಮಾರಾಟ ಮಾಡುವುದು.
ರಸಗೊಬ್ಬರಗಳನ್ನು ಪರವಾನಿಗೆಯಲ್ಲಿ ಘೋಷಿಸದೇ ಇರುವ ಸ್ಥಳಗಳಲ್ಲಿಸಂಗ್ರಹಿಸಿಟ್ಟು ಮಾರಾಟ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಅಲ್ಲದೇ ರೈತರಿಗೆ ರಶೀದಿಗಳನ್ನು ನೀಡದೇ ಇರುವುದು ಕಂಡುಬಂದಿದ್ದರಿಂದ ಮಳಿಗೆ ಮಾಲೀಕರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಅದಕ್ಕೆ ಉತ್ತರ ನೀಡುವವರೆಗೆ ಕೃಷಿ ಪರಿಕರಗಳ ಮಾರಾಟ ಮಾಡಬಾರದೆಂದು ಸೂಚಿಸಲಾಗಿದೆ ಎಂದು ಉಪನಿರ್ದೇಶಕ ಎಲ್.ಆಯ್. ರೂಡಗಿ ತಿಳಿಸಿದ್ದಾರೆ.
ಸಹಾಯಕ ಕೃಷಿ ನಿರ್ದೇಶಕರಾದ ಎಮ್.ಎಮ್.ನದಾಫ, ಆರ್.ಬಿ.ಪಾಟೀಲ, ಸಿ.ಐ. ಹೂಗಾರ, ಕೃಷಿ ಅಧಿಕಾರಿ ಎಸ್.ಬಿ.ಕರಗಣ್ಣಿ ಇದ್ದರು.