ಉಡುಪಿ, ಡಿಸೆಂಬರ್ 28; ಸರ್ಕಾರಿ ಶಾಲೆ ಅದು ಊರಿನ ನೆನಪಿದ ಬುತ್ತಿ. ಜ್ಞಾನ ನೀಡುವ ಅಕ್ಷರ ಧಾಮ. ಸರ್ವ ಧರ್ಮಗಳ ಮಂದಿರ. ಇಂತಹ ಸರ್ಕಾರಿಗಳು ಇಂದು, ವಿದ್ಯಾರ್ಥಿಗಳಿಲ್ಲದೇ ಸೊರಗಿ, ಶಿಕ್ಷರಿಲ್ಲದೇ ಬಾಗಿಲು ಮುಚ್ಚುತ್ತಿವೆ. ಆದರೆ ಬುದ್ಧಿವಂತರ ಜಿಲ್ಲೆಯ ಶಾಲೆಯೊಂದರಲ್ಲಿ ಕನ್ನಡ ಕಲಿಯಬೇಕು ಅಂತ ಬಂದಿರುವ ವಿದ್ಯಾರ್ಥಿಗಳಿದ್ದರೂ, ಖಾಯಂ ಶಿಕ್ಷಕರಿಲ್ಲದೇ ಮುಚ್ಚುವ ಹಂತಕ್ಕೆ ಬಂದಿದೆ.
ತಾಯಂದಿರು, ಖಾಯಂ ಶಿಕ್ಷಕರನ್ನು ನೇಮಿಸಿ ಶಾಲೆ ಉಳಿಸಿ ಎನ್ನುವ ಹೋರಾಟಕ್ಕೆ ಮುಂದಾಗಿದ್ದಾರೆ.
“ಐಸಿಯುನಲ್ಲಿ ಪೇಶೆಂಟ್ ಇಲ್ಲಾ ಅಂತ ಹಾಸ್ಪಿಟಲ್ ಮುಚ್ಚಲ್ಲ, ಅಸೆಂಬ್ಲಿಗೆ ಸದಸ್ಯರು ಬರೋಲ್ಲ ಅಂತ ಅಸೆಂಬ್ಲಿ ಮುಚ್ಚಲ್ಲ. ಹಾಗೆಯೇ ಎಲ್ಲಿಯವರೆಗೆ ಕನ್ನಡ ಕಲಿಬೇಕು ಅಂತ ಒಬ್ಬ ವಿದ್ಯಾರ್ಥಿ ಶಾಲೆ ಬಂದು ಕೂರ್ತಾನೋ ಅವನಿಗೆ ಕನ್ನಡದಲ್ಲೇ ಕಲಿಸೋದು ಸರ್ಕಾರದ ಕರ್ತವ್ಯ”
ಅಬ್ಬಾ…ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾದಲ್ಲಿ ಅನಂತ್ ನಾಗ್ ಹೊಡೆಯುವ ಈ ಡೈಲಾಗ್ ಸಾವಿರಾರು ಜನ ಮೆಚ್ಚಿದ್ದರು. ತಮ್ಮೂರಿನ ಸರ್ಕಾರಿ ಶಾಲೆ ಉಳಿಸುವ ಪಣ ತೊಟ್ಟಿದ್ದರು. ಆದರೆ ಅದು ಅಂದಿನ ಸಮಯಕ್ಕೆ ಮಾತ್ರ, ಸೀಮಿತ ಆಯಿತೋ ಗೊತ್ತಿಲ್ಲ. ಯಾಕೆಂದರೆ ಅದೆಷ್ಟೋ ಹಳ್ಳಿಯ ಶಾಲಾ, ವಿದ್ಯಾರ್ಥಿಗಳು ಮುಂದೆ ಬಂದು ಕನ್ನಡದಲ್ಲಿ ಕಲಿತೀವಿ ಅಂದರೂ ಶಿಕ್ಷಕರೇ ಇಲ್ಲವಾಗಿದೆ.