ಬೆಂಗಳೂರು, ಡಿ.20: ಕರ್ನಾಟಕ ಬಜೆಪಿಯ ಪ್ರಮುಖ ಮಹಿಳಾ ನಾಯಕಿ, ಪ್ರಸ್ತುತ ಕೇಂದ್ರದಲ್ಲಿ ಸಚಿವೆಯಾಗಿರುವ ಶೋಭಾ ಕರಂದ್ಲಾಜೆ ಅವರು ಇತ್ತೀಚೆಗೆ ವಿವಾದಗಳಿಂದ ದೂರ ಉಳಿಯುತ್ತಿರುವುದು ಹಾಗೂ ಎಲ್ಲದ್ದಕ್ಕೂ ಪ್ರತಿಕ್ರಿಯಿಸದಿರುವುದರ ಹಿಂದೆ ಬಿಜೆಪಿ ಹೈಕಮಾಂಡ್‌ನ ವಿಶೇಷ ಸೂಚನೆಯಿಂದ ಎಂಬ ಮಾತುಗಳು ಕೇಳಿಬರುತ್ತಿವೆ.
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವರಾಗಿರುವ ಶೋಭಾ ಕರಂದ್ಲಾಜೆ ಅವರು ಕೆಲವು ತಿಂಗಳಿಂದ ತಾವಾಯಿತು, ತಮ್ಮ ಕೆಲಸವಾಯಿತು ಎಂಬಂತಿದ್ದಾರೆ. ರಾಜ್ಯದಲ್ಲಿ ಸಾಕಷ್ಟು ರಾಜಕೀಯ ಚಟುವಟಿಕೆಗಳು, ಕೋಮು ಪ್ರಚೋದನೆಯ ಕೆಲಸಗಳು ನಡೆಯುತ್ತಿದ್ದರೂ ಸಹ ಅವರು ತುಟಿ ಬಿಚ್ಚುತ್ತಿಲ್ಲ. ಶೋಭಾ ಕರಂದ್ಲಾಜೆ ಅವರ ಹಿಂದಿನ ರಾಜಕಾರಣ ಮತ್ತು ಅವರು ಬೆಳೆದು ಬಂದ ದಾರಿಯನ್ನು ನೋಡಿದವರಿಗೆ ಈಗಿರುವ ಶೋಭಾ ಕರಂದ್ಲಾಜೆಯನ್ನು ಅರಗಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ.
ಮೊದಲಿನಿಂದಲೂ ಹಿಂದುತ್ವ ಮತ್ತು ರಾಷ್ಟ್ರೀಯ ವಿಚಾರಗಳ ಬಗ್ಗೆ ಯಾವ ನಾಯಕರಿಗೂ ಕಡಿಮೆ ಇಲ್ಲದಂತೆ ಮಾತನಾಡುತ್ತಾ ಮತ್ತು ಆಮೂಲಕವೇ ರಾಜಕಾರಣವನ್ನು ಕಟ್ಟಿಕೊಂಡಂತಹವರು ಶೋಭಾ ಕರಂದ್ಲಾಜೆ. ಕೋಮುಗಲಭೆಯ ವಿಷಯಗಳು ಎಲ್ಲಿಯೇ ನಡೆದರೂ ಮೊದಲು ಧ್ವನಿ, ಹೋರಾಟದ ಕಿಚ್ಚು ಆರಂಭವಾಗುತ್ತಿದ್ದುದು ಶೋಭಾ ಕರಂದ್ಲಾಜೆ ಅವರಿಂದ. ಈ ಕಾರಣದಿಂದಲೇ ಅವರು ಆರ್‌ಎಸ್‌ಎಸ್ ಮತ್ತು ಪರಿವಾರದ ಸಂಘಟನೆಗಳಿಗೂ ಹತ್ತಿರವಾಗಿ ಗುರುತಿಸಿಕೊಂಡಿದ್ದವರು. ಹಲವು ವಿವಾದಗಳನ್ನು ಮೈಮೇಲೆ ಎಳೆದುಕೊಂಡದ್ದರಿಂದ ಅವರ ಮೇಲೆ ಹಲವು ಪ್ರಕರಣಗಳೂ ಇವೆ. ಆದರೆ, ಅವರು ಎಂದೂ ಕೈಕಟ್ಟಿ ಕೂತವರಲ್ಲ. ನಿರಂತರ ಹೋರಾಟದ ಮೂಲಕವೇ ರಾಜಕೀಯ ಬದುಕು ಕಟ್ಟಿಕೊಂಡವರು.
ಕಾಂಟ್ರವರ್ಸಿ ಮಾಡಿಕೊಳ್ಳುವುದಿಲ್ಲಸದ್ಯ ರಾಜ್ಯ ರಾಜಕಾರಣದಿಂದ ದೂರ ಇರುವ ಶೋಭಾ ಕರಂದ್ಲಾಜೆಯವರು ರಾಜ್ಯದ ಯಾವುದೇ ವಿದ್ಯಮಾನಗಳ ಬಗ್ಗೆ ಅಷ್ಟಾಗಿ ಪ್ರತಿಕ್ರಿಯಿಸುತ್ತಿಲ್ಲ. ಇತ್ತೀಚೆಗೆ ಬಾಗಲಕೋಟೆಯಲ್ಲಿ ಪತ್ರಕರ್ತರು ಮತಾಂತರ ನಿಷೇಧ ಕಾಯ್ದೆ ಮತ್ತು ಅದಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಿರುವುದರ ಕುರಿತು ಕೇಳಿದ ಪ್ರಶ್ನೆಯೊಂದಕ್ಕೆ, “ನಾನು ಈಗ ಕೇಂದ್ರದ ಮಂತ್ರಿ. ಹೆಚ್ಚು ಕಾಂಟ್ರವರ್ಸಿ ಮಾತನಾಡುವುದಿಲ್ಲ” ಎಂದು ಎಷ್ಟು ಬೇಕೋ ಅಷ್ಟನ್ನೇ ಮಾತನಾಡಿದ್ದರು.
‘ದೊಡ್ಡ ಹುದ್ದೆ’ ಸಿಗಬಹುದು: ವಿವಾದ ಮಾಡಿಕೊಳ್ಳಬೇಡಿ
ಶೋಭಾ ಕರಂದ್ಲಾಜೆ ಅವರು ಇತ್ತೀಚೆಗೆ ಮೌನವಾಗಿ ರಾಜಕಾರಣ ಮಾಡುತ್ತಿರುವುದರ ಹಿಂದೆ ಹೈಕಮಾಂಡ್ ಸ್ಪಷ್ಟ ನಿರ್ದೇಶನ ಇದೆ ಎಂದು ಹೇಳಲಾಗುತ್ತಿದೆ. ಕರ್ನಾಟಕದಲ್ಲಿ ನಿಮಗೆ ‘ದೊಡ್ಡ ಹುದ್ದೆ’ ಒಲಿಯಬಹುದು. ಆದ್ದರಿಂದ ಯಾವುದೇ ವಿವಾದವನ್ನು ಎಳೆದುಕೊಳ್ಳದೆ ನೀವಾಯಿತು, ನಿಮ್ಮ ಕೆಲಸವಾಯಿತು ಎಂಬಂತೆ ಇರಿ ಎಂದು ಒಂದಲ್ಲಾ ಎರಡು ಬಾರಿ ಹಿರಿಯ ನಾಯಕರು ಶೋಭಾ ಕರಂದ್ಲಜೆ ಅವರಿಗೆ ಹೇಳಿದ್ದಾರೆ ಎಂದು ಅವರ ಆಪ್ತಮೂಲಗಳು ತಿಳಿಸಿವೆ.
ಆದರೆ, ‘ದೊಡ್ಡ ಹುದ್ದೆ’ ಎಂದರೆ ಯಾವುದು? ಅದು ಕರ್ನಾಟಕದ ಮುಖ್ಯಮಂತ್ರಿ ಹುದ್ದೆಯೇ? ಅಥವಾ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನವೇ? ಕೊಟ್ಟರೆ ಹೊಸ ಜವಾಬ್ದಾರಿ ಯಾವಾಗ ಕೊಡಬಹುದು? ಎಂಬುದರ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ಹೀಗಾಗಿ ಶೋಭಾ ಕರಂದ್ಲಾಜೆ ಅವರು ಎಲ್ಲೂ ವಿವಾದ ಮಾಡಿಕೊಳ್ಳುತ್ತಿಲ್ಲ. ತಮ್ಮ ಇಲಾಖೆ, ಉಡುಪಿ- ಚಿಕ್ಕಮಗಳೂರು ಕ್ಷೇತ್ರ ಮತ್ತು ಸಂಘಟನೆಯ ಕೆಲಸದಲ್ಲಿ ಮಾತ್ರ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದು ಹೇಳುತ್ತಿದೆ ಅವರ ಆಪ್ತ ಬಳಗ.
ಸದ್ಯ 2022ರಲ್ಲಿ ಐದು ರಾಜ್ಯಗಳ ಚುನಾವಣೆ ನಡೆಯಲಿದ್ದು, ಉತ್ತರ ಪ್ರದೇಶದ ಚುನಾವಣಾ ಉಸ್ತುವಾರಿಗಳಲ್ಲಿ ಶೋಭಾ ಕರಂದ್ಲಾಜೆ ಅವರಿಗೂ ಜವಾಬ್ದಾರಿ ವಹಿಸಲಾಗಿದೆ. ಇತ್ತೀಚೆಗೆ ಅವರು ಚುನಾವಣಾ ನಿರ್ವಹಣಾ ಸಮಿತಿಯ ಸಭೆಯನ್ನೂ ನಡೆಸಿದ್ದಾರೆ.
ಕಾರಣ ಇದೂ ಇರಬಹುದಾ?
ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಬಿ.ಎಸ್. ಯಡಿಯೂರಪ್ಪ ಅವರನ್ನು ಅಧಿಕಾರಕ್ಕೆ ಇಳಿಸುವ ಸಂದರ್ಭದಲ್ಲಿ ಬಿಜೆಪಿ ಹೈಕಮಾಂಡ್ ಅಳೆದು ತೂಗಿ ಅದೇ ಲಿಂಗಾಯತ ಸಮುದಾಯದ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿತು. ಅಲ್ಲದೆ, ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿಯೇ ಮುಂದಿನ ಚುನಾವಣೆಗೆ ಹೋಗಲಾಗುವುದು ಎಂದು ಸ್ವತಃ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರೇ ಘೋಷಿಸಿದ್ದರು. ಆದರೆ, ಕ್ರಮೇಣ ಬಸವರಾಜ ಬೊಮ್ಮಾಯಿ ಅವರ ವರ್ಚಸ್ಸು ಕಡಿಮೆಯಾಗುತ್ತಾ ಬರುತ್ತಿದೆ. ಬಿಟ್‌ಕಾಯಿನ್ ಹಗರಣ, ಟೆಂಡರ್‌ಗಳಲ್ಲಿ ಕಮಿಷನ್ ಆರೋಪ, ರಾಜ್ಯದಲ್ಲಿ ಕೋಮುಗಲಭೆಗಳನ್ನು ನಿಯಂತ್ರಣ ಮಾಡದಿರುವುದು ಸೇರಿದಂತೆ ಹಲವು ಆರೋಪಗಳು ಬೊಮ್ಮಾಯಿ ಅವರನ್ನು ಮುತ್ತಿಕೊಂಡಿವೆ, ಮೇಲೇಳದಂತೆ ಜಗ್ಗುತ್ತಿವೆ.
ಇನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಂಡಿನೋವು ಸಹ ಅವರನ್ನು ಇನ್ನಿಲ್ಲದಂತೆ ಬಾಧಿಸುತ್ತಿದೆ. ಅನೇಕ ಸಂದರ್ಭದಲ್ಲಿ ಅವರು ಕುಂಟುತ್ತಾ ನಡೆಯುತ್ತಿರುವುದನ್ನು ಕಂಡಿರಬಹುದು. ಇದೇ ರೀತಿ ಮುಂದುವರಿದರೆ 2023ರ ರಾಜ್ಯ ವಿಧಾನಸಭಾ ಚುನಾವಣೆಗೆ ರಾಜ್ಯವನ್ನು ಸುತ್ತಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುತ್ತಾರೆ ಎಂಬ ವಿಶ್ವಾಸ ಕೇಂದ್ರ ಮತ್ತು ರಾಜ್ಯ ಬಿಜೆಪಿ ನಾಯಕರಲ್ಲಿ ಉಳಿದಿಲ್ಲ. ಕೆಲವು ಮೂಲಗಳ ಪ್ರಕಾರ 2022ರ ಜನವರಿ ಅಥವಾ ಫೆಬ್ರವರಿಯಲ್ಲಿ ಮಂಡಿನೋವಿನ ಚಿಕಿತ್ಸೆಗಾಗಿ ಬಸವರಾಜ ಬೊಮ್ಮಾಯಿ ಅವರು ಅಮೆರಿಕಾಗೆ ತೆರಳಬಹುದು. ಆ ವೇಳೆಗೆ ಅವರೇ ಖುದ್ದು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಬಹುದು ಎಂದೂ ಸಹ ಹೇಳಲಾಗುತ್ತದೆ.
ಒಂದು ವೇಳೆ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಹುದ್ದೆ ತೊರೆದರೆ ಅದಕ್ಕೆ ಪರಿಗಣಿಸುವ ಹೆಸರುಗಳಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹಾಗೂ ಸಚಿವ ಮುರುಗೇಶ್ ನಿರಾಣಿ ಅವರ ಹೆಸರುಗಳು ಪ್ರಮುಖವಾಗಿ ಕೇಳಿಬರುತ್ತಿವೆ. ಶೆಟ್ಟರ್ ಈಗಾಗಲೇ ಒಂದು ಬಾರಿ ಮುಖ್ಯಮಂತ್ರಿ ಆಗಿದ್ದಾರೆ. ನಿರಾಣಿ ಮುಂದಿನ ಮುಖ್ಯಮಂತ್ರಿ ಆಗುತ್ತಾರೆ ಎಂದು ಈಗಾಗಲೇ ಬಿಜೆಪಿಯ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ. ಆದರೆ, ಶೋಭಾ ಕರಂದ್ಲಾಜೆ ಅವರನ್ನು ಮುಖ್ಯಮಂತ್ರಿ ಮಾಡಿದರೆ ರಾಜ್ಯದಲ್ಲಿ ಮೊದಲ ಬಾರಿಗೆ ಮಹಿಳೆಯೊಬ್ಬರನ್ನು ಮುಖ್ಯಮಂತ್ರಿ ಮಾಡಿದ ಸಂದೇಶ ನೀಡಿದಂತಾಗುತ್ತದೆ. ಅದಲ್ಲದೆ, ಮುಂದಿನ ಚುನಾವಣೆಗೆ ಪಕ್ಷ ಮತ್ತು ಆರ್‌ಎಸ್‌ಎಸ್ ಎರಡನ್ನೂ ಸರಿದೂಗಿಸಿಕೊಂಡು ಹೋಗುವ ವಿಶ್ವಾಸ ಬಿಜೆಪಿ ಹೈಕಮಾಂಡ್‌ಗೆ ಇದೆ ಎನ್ನಲಾಗಿದೆ.
ಯಡಿಯೂರಪ್ಪ ಅವರಿಂದ ದೂರ ದೂರ…
ಇನ್ನು ಶೋಭಾ ಕರಂದ್ಲಾಜೆ ಅವರು ತಮ್ಮ ರಾಜಕೀಯ ಗುರು ಬಿ.ಎಸ್. ಯಡಿಯೂರಪ್ಪ ಅವರೊಂದಿಗೂ ಸಂಪೂರ್ಣ ದೂರವಾಗಿದ್ದಾರೆ. ಸದ್ಯ ಯಡಿಯೂರಪ್ಪ ಅವರೊಂದಿಗೆ ಯಾವುದೇ ಸಂಪರ್ಕ ಇಲ್ಲ ಎಂದು ಅವರ ಆಪ್ತರು ಹೇಳುತ್ತಿದ್ದಾರೆ.
2019ರಲ್ಲಿ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರ ಬಿದ್ದ ಬಳಿಕ ಬಿ.ಎಸ್. ಯಡಿಯೂರಪ್ಪ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾದರು. ಆಗ ಶೋಭಾ ಕರಂದ್ಲಾಜೆ ಅವರೂ ಸಂಪುಟ ಸೇರುತ್ತಾರಾ ಎಂಬ ನಿರೀಕ್ಷೆ ಎಲ್ಲರನ್ನೂ ಕಾಡಿತ್ತು. ಆದರೆ, ಆಗಷ್ಟೇ ಸಂಸದೆಯಾಗಿದ್ದ ಶೋಭಾ ಕರಂದ್ಲಾಜೆ ಮತ್ತು ಯಡಿಯೂರಪ್ಪ ಅವರ ಮಧ್ಯೆ ಸಂಪರ್ಕ ದೂರವಾಗಿತ್ತು. ಈ ಮಧ್ಯೆ ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಸರ್ಕಾರದ ಎಲ್ಲ ‘ಉಸ್ತುವಾರಿ’ ತಾವೇ ವಹಿಸಿಕೊಂಡು ಶೋಭಾ ಅವರನ್ನು ಉದ್ದೇಶಪೂರ್ವಕವಾಗಿಯೇ ಬಿಎಸ್‌ವೈ ಅವರಿಂದ ದೂರ ಇರುವಂತೆ ನೋಡಿಕೊಂಡರು ಎಂದು ಹೇಳಲಾಗುತ್ತಿದೆ. ಉಡುಪಿ ಚಿಕ್ಕಮಗಳೂರು ಕ್ಷೇತ್ರಕ್ಕೆ ಯಾವುದೇ ಕೆಲಸ ಆಗಬೇಕಿದ್ದರೆ ಬಿಎಸ್‌ವೈ ಹಾಗೂ ಶೋಭಾ ಕರಂದ್ಲಾಜೆ ಅವರಿಗೆ ಆಪ್ತರಾಗಿರುವ ವ್ಯಕ್ತಿಯೊಬ್ಬರು ಕೊಂಡಿಯಂತೆ ಕಾರ್ಯನಿರ್ವಹಿಸಿದರು ಎಂಬುದು ಬಹುತೇಕರಿಗೆ ತಿಳಿದಿದೆ.
ಒಂದು ವೇಳೆ ಶೋಭಾ ಕರಂದ್ಲಾಜೆ ಅವರು ರಾಜ್ಯದ ಮುಖ್ಯಮಂತ್ರಿಯಾಗುವ ಪ್ರಸ್ತಾಪ ಬಂದರೆ ಯಡಿಯೂರಪ್ಪ ಅವರೂ ಸಹ ಸಮ್ಮತಿ ಸೂಚಿಸಿ, ಮುಂದಿನ ಚುನಾವಣೆಗೆ ಸಹಕರಿಸಬಹುದು ಎಂದು ಬಿಜೆಪಿ ಹೈಕಮಾಂಡ್ ನಾಯಕರು ಆಲೋಚಿಸಿದ್ದಾರೆ ಎಂದೂ ಸಹ ಹೇಳಲಾಗುತ್ತಿದೆ.