ಬೆಂಗಳೂರು: ಬಡತನ ರೇಖೆಗಿಂತ ಕೆಳಗಿರುವಂತ ರಾಜ್ಯದ ಜನರಿಗೆ ಉಚಿತ ಆಹಾರ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಬಿಪಿಎಲ್ ಪಡಿತರ ಚೀಟಿ( BPL Ration Card ) ಗಳನ್ನು ಹಂಚಿಕೆ ಮಾಡಲಾಗುತ್ತಿದೆ. ಈ ಕಾರ್ಡಗಳಿಗಾಗಿ ಹೊಸದಾಗಿ ಅರ್ಜಿಯನ್ನು ಅನೇಕ ಅರ್ಹ ಫಲಾನುಭವಿ ಕುಟುಂಬಗಳಿಂದ ಸಲ್ಲಿಸಲಾಗಿದೆ.
ಆದ್ರೇ ರಾಜ್ಯ ಸರ್ಕಾರ ಅಕ್ರಮವಾಗಿ ಪಡೆದಿರುವ ಬಿಪಿಎಲ್ ಕಾರ್ಡ್ ಗಳನ್ನು ಆರ್ಥಿಕ ಸಬಲರು ವಾಪಸ್ ಕೊಟ್ಟ ನಂತರವಷ್ಟೇ ಹೊಸ ಅರ್ಜಿದಾರರಿಗೆ ಕಾರ್ಡ್ ವಿತರಿಸಲು ನಿರ್ಧರಿಸಿದೆ ಎನ್ನಲಾಗಿದೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ಶೇ. 76.04, ನಗರ ಪ್ರದೇಶದಲ್ಲಿ ಶೇ. 49.36 ಸೇರಿ ಒಟ್ಟು 3,71,78,287 ಕುಟುಂಬಗಳ ಸದಸ್ಯರಿಗೆ ಬಿಪಿಎಲ್ ಕಾರ್ಡ್ ನೀಡಬೇಕಾಗಿತ್ತು. ಆದರೆ ರಾಜ್ಯದಲ್ಲಿ ಈಗ ಒಟ್ಟು 3,78,67,521 ಕ್ಕೆ ಬಿಪಿಎಲ್ ಸದಸ್ಯರಿದ್ದಾರೆ. ಇದರಲ್ಲಿ 6,89,234 ಹೆಚ್ಚಿನ ಸದಸ್ಯರು ಅಂದರೆ 3.5 ಲಕ್ಷಕ್ಕೂಹೆಚ್ಚಿನ ಬಿಪಿಎಲ್ ಕಾರ್ಡ್ ಗಳಿವೆ. ಹಾಗಾಗಿ ಆಹಾರ ಇಲಾಖೆ ಅಕ್ರಮವಾಗಿ ಪಡೆದಿರುವ ಬಿಪಿಎಲ್ ಕಾರ್ಡ್ ವಾಪಸ್ ಕೊಟ್ಟ ನಂತರ ಹೊಸ ಕಾರ್ಡ್ ಗಳನ್ನು ವಿತರಣೆ ಮಾಡಲು ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.