ಎಪಿಎಂಸಿ ಒಳಗೆ ಮಾರಾಟ ಮಾಡಬೇಕು ಎಂಬ ಉದ್ದೇಶದಿಂದ ಕರ್ನಾಟಕದಲ್ಲಿ ಎಪಿಎಂಸಿ ಕಾಯ್ದೆಯನ್ನು ಜಾರಿಗೆ ತರಲಾಗಿತ್ತು. ಆದರೆ ಇದೀಗ ಕರ್ನಾಟಕದಲ್ಲಿ ಎಲ್ಲಿ ಬೇಕಾದ್ರು ರೈತರು ತಮ್ಮ ಬೆಳೆಗಳನ್ನು ಮಾರಾಟ ಮಾಡಬಹುದು ಎಂಬ ಉದ್ದೇಶದಿಂದ ಎಪಿಎಂಸಿ ತಿದ್ದುಪಡಿ ಕಾಯ್ದೆ ಜಾರಿಗೆ ತರಲಾಗುತ್ತಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಸಮರ್ಥಿಸಿಕೊಂಡರು.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಚಿವ ಎಸ್.ಟಿ.ಸೋಮಶೇಖರ್ ಅವರು ಎಪಿಎಂಸಿ ಹೊರಗೆ ಮಾರಾಟ ಮಾಡಿದ್ರೆ ದಂಡ ವಿಧಿಸಲಾಗುತ್ತಿತ್ತು, ಅದೇ ರೀತಿ ನೋಟಿಸ್ ಕೊಡುತ್ತಿದ್ದರೂ ಇವರೆಡನ್ನು ತೆಗೆದು ಹಾಕಿದ್ದೇವೆ. ಬೆಳಗಾವಿಯಲ್ಲಿ ಬೆಳೆ ಬೆಳೆದ ರೈತ ರಾಜ್ಯದ ಯಾವ ಮಾರುಕಟ್ಟೆಯಲ್ಲಿ ಬೇಕಾದ್ರೂ ಮಾರಾಟ ಮಾಡಬಹುದು. ಹೀಗಾಗಿ ಯಾವ ರೈತರಿಗೂ ಇದರಿಂದ ಯಾವುದೇ ರೀತಿ ಧಕ್ಕೆ ಉಂಟಾಗುವುದಿಲ್ಲ. ಇನ್ನು ಒಳ್ಳೆಯ ಲಾಭದಲ್ಲಿರುವ ಎಪಿಎಂಸಿಗಳು ಯಾವ ಕಾರಣಕ್ಕೂ ಮುಚ್ಚುವುದಿಲ್ಲ ಎಂದು ಸ್ಪಷ್ಟಪಡಿಸಿದರು.