ನಾಳೆಯಿಂದ ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಾಹಿತಿ ನೀಡಿದ್ದಾರೆ.
ಚಳಿಗಾಲದ ಅಧಿವೇಶನಕ್ಕೆ ಕುಂದಾನಗರಿ ಬೆಳಗಾವಿ ಸಜ್ಜಾಗಿದೆ. ನಾಳೆಯಿಂದ ಬೆಳಗಾವಿ ಸುವರ್ಣ ಸೌಧದಲ್ಲಿ ಅಧಿವೇಶನ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಇಂದು ಸಿದ್ಧತೆಗಳನ್ನು ಪರಿಶೀಲನೆ ನಡೆಸಿದರು. ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿದ ಸ್ಪೀಕರ್ ಕಾಗೇರಿ ಅವರು ನಾಳೆ ಬೆಳಗ್ಗೆ 10.30ಕ್ಕೆ ಕಾರ್ಯಕಲಾಪಗಳ ಸಮಿತಿಯ ಸಭೆ ನಡೆಯಲಿದೆ. ಎಲ್ಲಾ ಪಕ್ಷದ ಸದಸ್ಯರು ಭಾಗವಹಿಸಲಿದ್ದಾರೆ. ಸಭೆಯ ಎಲ್ಲಾ ದಿನದ ಕಾರ್ಯ ಕಲಾಪದ ವಿವರಗಳನ್ನ ಚರ್ಚೆ ಮಾಡುತ್ತೇವೆ. ಸಭೆಯಲ್ಲಿ ಚರ್ಚೆ ಮಾಡಿ ಕಾರ್ಯಕಲಾಪದ ವಿವರ ಪಡೆಯುತ್ತೇವೆ ಎಂದರು. ಇನ್ನು ಸರ್ಕಾರ ಇದುವರೆಗೂ ಸದನದಲ್ಲಿ ಯಾವ ಯಾವ ಬಿಲ್ ಮಂಡಿಸಲಿದೆ ಎನ್ನುವುದನ್ನು ಕಳುಹಿಸಿಲ್ಲ. ಬಿಲ್ ಕಳಿಸ್ತೀವಿ ಎಂದು ಹೇಳಿದ್ದಾರೆ, ಆದರೆ ಇದುವರೆಗೂ ಬಂದಿಲ್ಲ. ನಾಳೆಯೊಳಗೆ ಕಳುಹಿಸುತ್ತೇವೆ ಎಂದು ಮೌಖಿಕವಾಗಿ ತಿಳಿಸಿದ್ದಾರೆ ಅಂತಾ ಹೇಳಿದರು.
ಒಟ್ಟಿನಲ್ಲಿ ಎರಡು ವರ್ಷಗಳ ಬಳಿಕ ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿದ್ದರು. ಈ ಬಾರಿಯಾದ್ರೂ ಅಧಿವೇಶನದಲ್ಲಿ ಒಳ್ಳೆಯ ರೀತಿ ಚರ್ಚೆಯಾಗಿ. ಈ ಭಾಗದ ಜ್ವಲಂತ ಸಮಸ್ಯೆಗಳು ಪರಿಹಾರವಾಗಲಿ ಎಂಬುದೇ ಎಲ್ಲರ ಆಶಯವಾಗಿದೆ.