ಬೆಳಗಾವಿ: ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಬೆಳಗಾವಿಗೆ ಆಗಮಿಸಿದ್ದ ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿಯಾಗಲು ಅವಕಾಶ ಸಿಗದೇ ರೈತರೊಬ್ಬರು ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.
ಬೆಳಗಾವಿ ಖಾಸಗಿ ರೆಸಾರ್ಟ್ ನಲ್ಲಿ ಸಭೆ ನಡೆಸುತ್ತಿದ್ದ ಸಿಎಂ ಭೇಟಿಗೆಂದು ರೈತ ಮುಖಂಡ ರವಿ ಪಾಟೀಲ್ ಆಗಮಿಸಿದ್ದರು. ಈ ವೇಳೆ ಪೊಲೀಸರು ರೈತ ಮುಖಂಡನನ್ನು ತಡೆದಿದ್ದಾರೆ. ಅಲ್ಲದೇ ಸಿಎಂ ಭೇಟಿಗೆ ಅವಕಾಶ ನೀಡಿಲ್ಲ.
ಇದರಿಂದ ಭಾವುಕನಾದ ರೈತ, ಅಕಾಲಿಕ ಮಳೆಯಿಂದ ಭತ್ತದ ಬೆಳೆ ಹಾನಿಗೀಡಾಗಿ ಸಂಕಷ್ಟಕ್ಕೀಡಾಗಿದ್ದು, ಸೂಕ್ತ ಪರಿಹಾರಕ್ಕಾಗಿ ಮನವಿ ಮಾಡಲೆಂದು ಬಂದಿರುವೆ. ಸಿಎಂ ಭೇಟಿಗೆ ಅವಕಾಶ ನೀಡುವಂತೆ ಕೇಳಿಕೊಂಡಿದ್ದೇನೆ. ಆದರೂ ಮುಖ್ಯಮಂತ್ರಿಗಳ ಭೇಟಿಗೆ ಅವಕಾಶ ನಿಡಿಲ್ಲ ಎಂದು ಹೇಳಿದರು.
ಬೇಸರಗೊಂಡ ರೈತ ರವಿ ರೈತರ ಕಷ್ಟವನ್ನೂ ಆಲಿಸದವರು ಯಾವ ಸೀಮೆ ಸಿಎಂ? ನಾನು ಪ್ರತಿಭಟನೆಗಾಗಿ ಬಂದಿಲ್ಲ. ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಬೆಳೆ ಪರಿಹಾರ ನೀಡುವಂತೆ ಮನವಿ ಮಾಡಲೆಂದು ಬಂದಿರುವೆ. ಆದರೆ ಸಿಎಂ ಭೇಟಿಗೂ ತಡೆಯೊಡ್ಡುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.