ಬೈಲಹೊಂಗಲ : “ಬಿಜೆಪಿ ಸರ್ಕಾರ ಮೂರು ವರ್ಷದಲ್ಲಿ ಒಂದೇ ಒಂದು ಮನೆ ನಿರ್ಮಾಣ ಮಾಡಲಿಕ್ಕೆ ಆಗಿಲ್ಲ. ಆದರೆ ಚುನಾವಣೆ ಸಂದರ್ಭದಲ್ಲಿ ಸಾವಿರಾರು ಮನೆಗಳನ್ನು ನೀಡಿದ್ದೇವೆಂದು ಸುಳ್ಳಿನ ಸರಮಾಲೆಯನ್ನೇ ಕಟ್ಟುತ್ತಿದ್ದಾರೆ” ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ವಿಧಾನಪರಿಷತ್ ಚುನಾವಣೆಯ ಪ್ರಚಾರಾರ್ಥವಾಗಿ ಬೈಲಹೊಂಗಲ ಮತಕ್ಷೇತ್ರದ ಗ್ರಾಮ ಪಂಚಾಯ್ತಿ ಚುನಾಯಿತ ಜನಪ್ರತಿನಿಧಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿ, ” ಈಗಿರುವ ರಸ್ತೆಗಳು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆಗಿದ್ದವು. ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಒಂದೇ ಒಂದು ಮನೆ, ರಸ್ತೆಯನ್ನು ಮಾಡಿಲ್ಲ” ಎಂದರು.
” ಬಿಜೆಪಿ ಪಕ್ಷದವರು ಸುಳ್ಳಿನ ಸರಮಾಲೆಯನ್ನೇ ಕಟ್ಟುತ್ತಾರೆ. ದಿಲ್ಲಿಯ, ಅವರ ಬಾಸ್ ( ಪ್ರಧಾನಿ ಮೋದಿ) ಸುಳ್ಳು ಹೇಳಿದ ತಕ್ಷಣವೇ, ಇಲ್ಲಿನ ನಾಯಕರು, ಮುಖಂಡರು ಸಹ ಸುಳ್ಳುಗಳನ್ನು ಹೇಳಲಿಕ್ಕೆ ಪ್ರಾರಂಭ ಮಾಡುತ್ತಾರೆ. ಪ್ರವಾಹದಲ್ಲಿ ಮನೆ ಕಳೆದುಕೊಂಡ ಬಡವರು ಪರಿಹಾರಕ್ಕಾಗಿ ಅಲೆದು ಸುಸ್ತಾಗಿದ್ದಾರೆಂದು” ಕಳವಳ ವ್ಯಕ್ತಪಡಿಸಿದರು.
ನಮ್ಮ ಕಡೆ ಗೆಲ್ಲುವಷ್ಟು ಮತದಾರರು ಇದ್ದಾರೆ :
” ಈಗಾಗಲೇ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಗಳಿಂದ ಗೊಂದಲ ಆಗಿದೆ. ವಿಧಾನ ಪರಿಷತ್ ಚುನಾವಣೆ ಕಣದಲ್ಲಿಎರಡೇ ಪಕ್ಷಗಳ ಅಭ್ಯರ್ಥಿಗಳು ಇದ್ದಿದ್ದರೆ, ಕಾಂಗ್ರೆಸ್ ಸುಲಭವಾಗಿ ಗೆಲ್ಲುತ್ತಿದ್ದೇವು. ಆದರೂ ಸಹ ನಮ್ಮ ಕಡೆ ಗೆಲ್ಲುವಷ್ಟು ಮತದಾರರು ಇದ್ದಾರೆ. ಆತಂಕ ಪಡುವ ಅಗತ್ಯವಿಲ್ಲವೆಂದರು.”
” ಪಕ್ಷೇತರ ಅಭ್ಯರ್ಥಿಗಳು ಗ್ರಾಮ ಪಂಚಾಯ್ತಿಗಳಿಗೆ ಭೇಟಿ ನೀಡಿ, ಗೆಲ್ಲುವ ತಂತ್ರ ಮಾಡುತ್ತಿದ್ದಾರೆ. ಆದ್ದರಿಂದ ಸದಸ್ಯರು ಹುಷಾರ್ ಆಗಿರಿ, ಯಾವುದೇ ಕಾರಣಕ್ಕೂ ಗ್ರಾಮ ಪಂಚಾಯ್ತಿ ಬಾಗಿಲು ತೆಗೆಯಬೇಡಿ. ಇಲ್ಲದಿದ್ದರೆ ನಿಮ್ಮನ್ನು ತೆಗೆದುಕೊಂಡು ಹೋಗುತ್ತಾರೆ ” ಎಂದು ಲೇವಡಿ ಮಾಡಿದರು.
” ಬಿಜೆಪಿಯಲ್ಲಿ ವ್ಯಕ್ತಿಗತ ಲಾಭಕ್ಕಾಗಿ ಚುನಾವಣೆ ಮಾಡುತ್ತಾರೆ. ಆದರೆ ನಾವು ಹಾಗಲ್ಲ, ಪಕ್ಷದ ಅಭ್ಯರ್ಥಿ ಗೆದ್ದರೇ ಪಕ್ಷಕ್ಕೆ ಶಕ್ತಿ ಬರಲಿದೆ. ಪಕ್ಷದ ಪರವಾಗಿ ಕೆಲಸ ಮಾಡುತ್ತೇವೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ್ ಹಟ್ಟಿಹೊಳಿಗೆ ಮತ ನೀಡಿ ಆಶೀರ್ವಾದ ಮಾಡಿ, ನಿಮ್ಮ ಕೆಲಸ ಮಾಡಲು ಅವಕಾಶ ನೀಡಬೇಕು ” ಎಂದರು.
ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ, ಅಭ್ಯರ್ಥಿ ಚನ್ನರಾಜ್ ಹಟ್ಟಿಹೊಳಿ, ವಿನಯ ನಾವಲಗಟ್ಟಿ, ಕಿರಣ್ ಸಾಧುನ್ನವರ ಸೇರಿದಂತೆ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Laxmi News 24×7