ಬೆಂಗಳೂರು : ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯಲ್ಲಿ ಕಾಯಂಗೊಂಡ ಗುತ್ತಿಗೆ ನೌಕರರಿಗೆ ಭರ್ಜರಿ ಸಿಹಿಸುದ್ದಿ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯಲ್ಲಿ ಗುತ್ತಿಗೆಆಧಾರದಲ್ಲಿ ನೇಮಕಗೊಂಡು ನಂತರ ಕಾಯಂಗೊಂಡಿರುವ 1983 ಶಿಕ್ಷಕರು, ಉಪನ್ಯಾಸಕರು ಹಾಗೂ ಪ್ರಾಂಶುಪಾಲರಿಗೆ ನೇಮಕದ ದಿನದಿಂದ ನಿಗದಿಯಾಗಿರುವ ವೇತನವನ್ನು ಯಥಾವತ್ತಾಗಿ ಮುಂದುವರೆಸುವ ಕುರಿತಂತೆ ಶಿಫಾರಸು ಮಾಡಲಾಗಿದೆ.
ಕಾಯಂಗೊಂಡ ಗುತ್ತಿಗೆ ನೌಕರರ ಕಾಲಮಿತಿ ಬಡ್ತಿ ಹಾಗೂ ಸ್ಥಗಿತ ವೇತನ ಬಡ್ತಿಯನ್ನು ಎಂದಿನಂತೆ ಮಂಜುರು ಮಾಡಬೇಕು ಎಂದು ಪರಿಶೀಲನಾ ಸಮಿತಿ ಶಿಫಾರಸು ಮಾಡಿದೆ.
ಗುತ್ತಿಗೆ ಆಧಾರದಲ್ಲಿ ನೇಮಕಗೊಂಡು ನಂತರ ಕಾಯಂ ಆಗಿರುವ ಬೋಧಕ ವರ್ಗದ ವೇತನ ಮತ್ತು ಪಿಂಚಣಿ ಪುನರ್ ನಿಗದಿಗಾಗಿ ಇಲಾಖೆಯು ರಚಿಸಿದ್ದ ವಿಧಾನ ಪರಿಷತ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡರ ನೇತೃತ್ವದ ಪರಿಶೀಲನಾ ಸಮಿತಿಯು ಕಾಯಂಗೊಂಡ ಗುತ್ತಿಗೆ ನೌಕರರ ಬಡ್ತಿಗೆ ಶಿಫಾರಸು ಮಾಡಿದೆ.