ಬೆಳಗಾವಿ: ‘ನಾಮಪತ್ರ ವಾಪಸ್ ತೆಗೆದುಕೊಳ್ಳುವುದಿಲ್ಲ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸುತ್ತಮುತ್ತ ಇರುವವರು ಊಹಾಪೋಹಗಳನ್ನು ಹಬ್ಬಿಸುತ್ತಿರುತ್ತಾರೆ’ ಎಂದು ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಗೋಕಾಕದ ಉದ್ಯಮಿ ಲಖನ್ ಜಾರಕಿಹೊಳಿ ಪ್ರತಿಕ್ರಿಯಿಸಿದರು.
ಇಲ್ಲಿ ನಾಮಪತ್ರ ಸಲ್ಲಿಕೆ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ಟಿಕೆಟ್ ವಿಚಾರದಲ್ಲಿ ಸಹೋದರರು ಅವರವರ ಅನಿಸಿಕೆ ಹೇಳಿದ್ದಾರೆ. ನಮ್ಮ ಬೆಂಬಲಿಗರು-ಕಾರ್ಯಕರ್ತರು ಹೇಳಿದ್ದಕ್ಕೆ ಸ್ಪರ್ಧಿಸಿದ್ದೇನೆ’ ಎಂದು ತಿಳಿಸಿದರು.
‘ಪ್ರತಿಸ್ಪರ್ಧಿ ಯಾರೂ ಇಲ್ಲ. ಆ ಬಗ್ಗೆ ವಿಚಾರ ಮಾಡುವುದಿಲ್ಲ. ಸಹೋದರರು ಅವರವರ ಪಕ್ಷದ ಪರ ಕೆಲಸ ಮಾಡುತ್ತಾರೆ. ಸತೀಶಣ್ಣ ಏನೇ ಹೇಳಿದರೂ ನಮ್ಮಣ್ಣ. ಗ್ರಾಮ ಪಂಚಾಯಿತಿಗಳ ಅಭಿವೃದ್ಧಿಗಾಗಿ ಸ್ಪರ್ಧಿಸಿದ್ದೇನೆ. ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದಾರಷ್ಟೆ; ಇದೇನು ಶಕ್ತಿ ಪ್ರದರ್ಶನವಲ್ಲ’ ಎಂದರು.
‘ನನ್ನ ಸ್ಪರ್ಧೆಯಿಂದ ಬಿಜೆಪಿಗೆ ಲಾಭವೇ ಆಗಲಿದೆ. ಆದರೆ, ನಷ್ಟವಾಗುತ್ತದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ನಾನು ಬಂಡಾಯ ಅಭ್ಯರ್ಥಿ ಅಲ್ಲ. ಪಕ್ಷೇತರ ಅಭ್ಯರ್ಥಿ’ ಎಂದು ಪ್ರತಿಕ್ರಿಯಿಸಿದರು.
‘ನಾನು ಬಿಜೆಪಿ ಟಿಕೆಟ್ ಕೇಳಿರಲಿಲ್ಲ. ಈ ವಿಷಯದಲ್ಲಿ ಅನಗತ್ಯ ಗೊಂದಲ ನಿರ್ಮಾಣವಾಗಿದೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದೆ. ಗೆಲ್ಲಿಸಿದರೆ ಅಭಿವೃದ್ಧಿಯ ಭರವಸೆ ನೀಡಿದ್ದೇನೆ. ಬೆಂಬಲಿಗರು ಹಾಗೂ ಮತದಾರರ ಬೆಂಬಲವಿದೆ. ಈ ಭರವಸೆ ಮೇಲೆ ಕಣಕ್ಕಿಳಿದಿದ್ದೇನೆ’ ಎಂದು ತಿಳಿಸಿದರು.