ಬೆಳಗಾವಿ ತಾಲೂಕಿನ ಮಚ್ಛೆಯಲ್ಲಿ ರೈತರ ಮೇಲಿನ ದಬ್ಬಾಳಿಕೆ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ರೈತರ ಭೂಮಿಯನ್ನು ಯಾವುದೇ ಕಾರಣಕ್ಕೂ ಕಸಿದುಕೊಳ್ಳಬಾರದು. ಒಂದು ವೇಳೆ ಭೂಮಿ ತೆಗೆದುಕೊಂಡರೆ ಭೂಮಿಯ ಬದಲಾಗಿ ಭೂಮಿಯನ್ನೇ ಕೊಡಬೇಕು ಇಲ್ಲದಿದ್ರೆ ಉಪವಾಸ ಸತ್ಯಾಗ್ರಹ ಮಾಡಬೇಕಾಗುತ್ತದೆ ಎಂದು ಹೋರಾಟಗಾರರು ಎಚ್ಚರಿಸಿದರು.
ಶುಕ್ರವಾರ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಆಗಮಿಸಿದ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಪದಾಧಿಕಾರಿಗಳು ಹಲಗಾ-ಮಚ್ಛೆ ಬೈಪಾಸ್ ನಿರ್ಮಾಣಕ್ಕಾಗಿ ರೈತರ ಭೂಮಿಯನ್ನು ದಬ್ಬಾಳಿಕೆಯಿಂದ ಅತಿಕ್ರಮಣ ಮಾಡಿಕೊಳ್ಳಬಾರದು. ಒಂದು ವೇಳೆ ಅನಿವಾರ್ಯ ಸಂದರ್ಭದಲ್ಲಿ ರೈತರ ಭೂಮಿ ಪಡೆದುಕೊಂಡರೆ ಅದಕ್ಕೆ ಬದಲಾಗಿ ಭೂಮಿಯನ್ನೇ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ರೈತ ಮುಖಂಡ ಅಪ್ಪಾಸಾಹೇಬ ದೇಸಾಯಿ ಮಚ್ಛೆಯಲ್ಲಿ ತನ್ನ ಭೂಮಿ ಉಳಿಸಿಕೊಳ್ಳಲು ರೈತ ತನ್ನ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವುದು ನಿಜವಾಗಿಯೂ ವಿಷಾದನೀಯ ಸಂಗತಿ. ಸರ್ಕಾರ ಈ ಮಟ್ಟಕ್ಕೆ ರೈತರನ್ನು ಇಳಿಸಬಾರದಾಗಿತ್ತು. ರೈತರ ಇಚ್ಛೆಯ ವಿರುದ್ಧ ಸರ್ಕಾರ ನಡೆದುಕೊಳ್ಳಬಾರದು. ರೈತನಿಗೆ ಭೂಮಿ ಎಂದರೆ ಉಸಿರು, ಭೂಮಿ ಎಂದರೆ ಆತ್ಮ, ಭೂಮಿ ಎಂದರೆ ರೈತನ ಸರ್ಟಿಫಿಕೇಟ್, ಭೂಮಿಯನ್ನು ಬಿಟ್ಟು ರೈತ ಬದುಕಲಾರ. ಹೀಗಾಗಿ ಅಭಿವೃದ್ಧಿ ನೆಪದಲ್ಲಿ ಈ ರೀತಿ ರೈತರ ಮೇಲೆ ದಬ್ಬಾಳಿಕೆ ಮಾಡುವುದು ಸರಿಯಲ್ಲ. ಭೂಮಿ ಬದಲು ಭೂಮಿಯನ್ನೆ ಕೊಡಬೇಕು. ಒಂದು ವೇಳೆ ರೈತರಿಗೆ ನ್ಯಾಯ ಕೊಡದಿದ್ರೆ ಉಪವಾಸ ಸತ್ಯಾಗ್ರಹ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಮಾರುತಿ ಕಡೇಮನಿ, ಸುಭಾಷ ದಯಗುಂಡೆ, ನಾಮದೇವ ದುಡುಮ, ದುಂಡಪ್ಪ ಪಾಟೀಲ್, ಫಕೀರ್ ಸದಾವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.