ಉಳ್ಳಾಲ: ಕೇಂದ್ರ ಸರಕಾರ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಇಳಿಕೆ ಮಾಡಿದ ಬೆನ್ನಲ್ಲೇ ಕರ್ನಾಟಕ ಸರಕಾರವೂ ತೈಲ ದರ ಇಳಿಕೆಗೆ ಕ್ರಮ ಕೈಗೊಂಡಿದ್ದರಿಂದ ತಲಪಾಡಿ, ಜಾಲ್ಸೂರು ಸೇರಿದಂತೆ ಕೇರಳ – ಕರ್ನಾಟಕ ಗಡಿ ಪ್ರದೇಶಗಳಲ್ಲಿರುವ ಕರ್ನಾಟಕದ ಪೆಟ್ರೋಲ್ ಬಂಕ್‌ಗಳಲ್ಲಿ ವಾಹನಗಳ ದಟ್ಟಣೆ ಕಾಣಿಸುತ್ತಿದೆ.
ಅತ್ತ ಕೇರಳ ಭಾಗದ ಬಂಕ್‌ಗಳು ಬಿಕೋ ಎನ್ನುತ್ತಿವೆ. ಕಾರಣ ಡೀಸೆಲ್‌ಗೆ 8.5 ರೂ. ಮತ್ತು ಪೆಟ್ರೋಲ್‌ಗೆ 5.5 ರೂ. ವ್ಯತ್ಯಾಸ ಇರುವುದು.
ಮೇಲಿನ ತಲಪಾಡಿಯ ಕೇರಳ ಪೆಟ್ರೋಲ್ ಬಂಕ್‌ನಲ್ಲಿ ಒಂದು ವಾರದಿಂದ ಗ್ರಾಹಕರಿಲ್ಲದೆ ವ್ಯವಹಾರಕ್ಕೆ ನಷ್ಟವಾಗಿದೆ. ದಿನವೊಂದಕ್ಕೆ 6,000 ಲೀಟರ್‌ಗೂ ಹೆಚ್ಚು ಪೆಟ್ರೋಲ್, ಡೀಸೆಲ್ ಮಾರಾಟವಾಗುತ್ತಿದ್ದರೆ ಈಗ 2 ಸಾವಿರ ಲೀ. ದಾಟುವುದು ಕಷ್ಟಕರವಾಗಿದೆ. ಪಂಪ್‌ಗೆ ಶೇ. 75ರಷ್ಟು ನಷ್ಟ ಉಂಟಾಗುತ್ತಿದ್ದು, ಸಿಬಂದಿ ಕಡಿತ ಮಾಡಲಾಗಿದೆ.
ಗ್ರಾಹಕರು ಬಂದು ಬೆಲೆ ವಿಚಾರಿಸಿ ವಾಪಸಾಗುತ್ತಿದ್ದಾರೆ. ಕೇರಳ ಸರಕಾರ ಇದನ್ನು ಮನಗಂಡು ಅಬಕಾರಿ ಸುಂಕವನ್ನು ಇಳಿಕೆ ಮಾಡಿದಲ್ಲಿ ವ್ಯವಹಾರ ಮುಂದುವರಿಸಲು ಸಾಧ್ಯ ಎನ್ನುತ್ತಾರೆ ಬಂಕ್ ಮೇಲ್ವಿಚಾರಕ ತಾಜುದ್ದಿನ್ ಮತ್ತು ಸಿಬಂದಿ ಹರೀಶ್.
ಇದೇ ವೇಳೆ ತಲಪಾಡಿಯಲ್ಲಿ ಕರ್ನಾಟಕ ಭಾಗದಲ್ಲಿರುವ ಬಂಕ್ ಟೋಲ್ ಗೇಟಿಗೂ ಮೊದಲೇ ಇರುವುದರಿಂದ ಕೇರಳ ಭಾಗದ ವಾಹನ ಚಾಲಕರು ಇಲ್ಲಿಗೆ ಬಂದು ಇಂಧನ ತುಂಬಿಸಿ ಹೋಗುತ್ತಿದ್ದಾರೆ. ಇಲ್ಲಿ ಹೆಚ್ಚುವರಿ ಸಿಬಂದಿಯನ್ನು ನೇಮಿಸುವ ಸ್ಥಿತಿ ಇದೆ ಎಂದು ಬಂಕ್ ಮೇಲ್ವಿಚಾರಕಮಹೇಶ್ ತಿಳಿಸಿದರು.
Laxmi News 24×7