ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿದ ದಿನದಿಂದ ರಾಜ್ಯದಲ್ಲಿ ನೇತ್ರದಾನಕ್ಕೆ ಮನಸ್ಸು ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಅಪ್ಪು ಕಣ್ಣುಗಳಿಂದ ನಾಲ್ಕು ಜಗತ್ತು ನೋಡುವಂತಾಗಿದೆ. ಇದರಿಂದ ಪ್ರೇರಣೆ ಹೊಂದಿದ ಪುನೀತ್ ಅಭಿಮಾನಿಗಳು ಹಾಗೂ ರಾಜ್ಯದ ಜನರು ಸ್ವಯಂ ಪ್ರೇರಿತರಾಗಿ ತಮ್ಮ ಕಣ್ಣುಗಳನ್ನು ದಾನ ಪತ್ರಕ್ಕೆ ಸಹಿ ಮಾಡುತ್ತಿದ್ದಾರೆ.
ಇವರ ಸಾಲಿಗೆ ಚಾಮರಾಜಪೇಟೆಯ ಶಾಸಕ ಜಮೀರ್ ಅಹ್ಮದ್ ಖಾನ್ ಕೂಡ ಸೇರಿಕೊಂಡಿದ್ದಾರೆ.
ಜಮೀರ್ ಅಹ್ಮದ್ ಖಾನ್ ಇಂದು ( ನವೆಂಬರ್ 10) ತಮ್ಮ ಬೆಂಬಲಿಗರೊಂದಿಗೆ ಮಿಂಟೊ ಆಸ್ಪತ್ರೆಗೆ ತೆರೆಳಿ ತಮ್ಮ ಕಣ್ಣುಗಳನ್ನು ದಾನ ಪತ್ರಕ್ಕೆ ಸಹಿ ಮಾಡಿದ್ದಾರೆ. ಜಮೀರ್ ಜೊತೆಗೆನೇ ಸುಮಾರು 150 ಅಧಿಕ ಬೆಂಬಲಿಗರೂ ಕೂಡ ಪುನೀತ್ ರಾಜ್‌ಕುಮಾರ್ ಅಗಲಿದ ನೋವಿನಲ್ಲೇ ನೇತ್ರದಾನಕ್ಕೆ ಮುಂದಾಗಿ ಬೇರೆಯವರಿಗೂ ಸ್ಪೂರ್ತಿಯಾಗಿದ್ದಾರೆ. ಜಮೀರ್ ಹಾಗೂ ಪುನೀತ್ ರಾಜ್‌ಕುಮಾರ್ ಬಹಳ ಆತ್ಮೀಯರಾಗಿದ್ದರು. ಪುನೀತ್ ರಾಜ್‌ಕುಮಾರ್ ಹಠಾತ್ ನಿಧನದಿಂದ ಜಮೀರ್ ಅಷ್ಟೇ ಅಲ್ಲ ಅವರ ಕುಟುಂಬದವರೂ ನೋವಿನಲ್ಲಿದ್ದಾರೆ.
ಜಮೀರ್ ರಾಜಕೀಯ ಎಂಟ್ರಿಗೂ ಮುನ್ನ ಅಣ್ಣಾವ್ರ ಕುಟುಂಬದೊಂದಿಗೆ ನಂಟು
ಜಮೀರ್ ಅಹ್ಮದ್ ಖಾನ್ ರಾಜಕೀಯಕ್ಕೆ ಬರುವುದಕ್ಕೆ ಮುನ್ನ ಚಾಮರಾಜ ಪೇಟೆಯಲ್ಲಿರುವ ನ್ಯಾಷನಲ್ ಟ್ರಾವೆಲ್ಸ್ ಅನ್ನು ನೋಡಿಕೊಳ್ಳುತ್ತಿದ್ದರು. ಅಲ್ಲಿಂದ ಅಣ್ಣಾವ್ರ ಕುಟುಂಬಕ್ಕೆ ಹಾಗೂ ಜಮೀರ್ ಅಹ್ಮದ್ ಖಾನ್ ಕುಟುಂಬಕ್ಕೆ ನಂಟಿದೆ. ಅಣ್ಣಾವ್ರ ನಿಧನದ ಬಳಿಕ ಅದೇ ಸ್ನೇಹ, ಆತ್ಮೀಯತೆ ಅವರ ಮಕ್ಕಳ ಕಾಲಕ್ಕೂ ಮುಂದುವರೆಯಿತು. ಜಮೀರ್ ಅಹ್ಮದ್ ಖಾನ್ ಹಾಗೂ ಪುನೀತ್ ರಾಜ್‌ಕುಮಾರ್ ಇಬ್ಬರೂ ಆಗಾಗ ಭೇಟಿಯಾಗುತ್ತಿದ್ದರು. ಫೋನ್‌ನಲ್ಲಿ ನಿರಂತರ ಸಂಭಾಷಣೆ ಮಾಡುತ್ತಿದ್ದರು. ಜಮೀರ್ ರಾಜಕೀಯ ಪ್ರವೇಶ ಮಾಡಿದ ಮೇಲೂ ಅದೇ ಸಂಬಂಧ ಮುಂದುವರೆದಿತ್ತು.
ಜಮೀರ್ ತಾಯಿಯ ಕೈ ರುಚಿ ಇಷ್ಟ ಪಡುತ್ತಿದ್ದ ಅಣ್ಣಾವ್ರು
ಜಮೀರ್ ತಂದೆ ಕಾಲದಿಂದಲೂ ಅಣ್ಣಾವ್ರ ಕುಟುಂಬದೊಂದಿಗೆ ನಂಟಿ ಬೆಳೆಸಿಕೊಂಡು ಬಂದಿದ್ದಾರೆ. ಅಂದಿನಿಂದ ಇಬ್ಬರ ಕುಟುಂಬ ಊಟಕ್ಕೆ ಹೋಗಿ ಬರುವುದು ವಾಡಿಕೆಯಾಗಿತ್ತು. ಹೇಳಿ ಕೇಳಿ ಅಣ್ಣಾವ್ರು ನಾನ್ ವೆಜ್ ಪ್ರಿಯಾಗಿದ್ದರಿಂದ ಜಮೀರ್ ತಾಯಿ ಮಾಡುವ ಅಡುಗೆ ತುಂಬಾನೇ ಇಷ್ಟ ಪಡುತ್ತಿದ್ದರು. ಕಾಡುಗಳ್ಳ ವೀರಪ್ಪನ್‌ನಿಂದ ಡಾ.ರಾಜ್‌ಕುಮಾರ್ ಬಿಡುಗಡೆಗೊಂಡ ಮೂರು ದಿನ ಆಗಿತ್ತಷ್ಟೇ. ಆಗಲೇ ಅಣ್ಣಾವ್ರು ಜಮೀರ್ ಮನೆಗೆ ಬಂದು ಅವರ ತಾಯಿಯ ಕೈ ರುಚಿ ಸವೆದಿದ್ದರು. ಈ ವಿಷಯವನ್ನು ಸ್ವತಃ ಜಮೀರ್ ಅಹ್ಮದ್ ಖಾನ್ ಅವರೇ ಸಾಕಷ್ಟು ಬಾರಿ ಹೇಳಿಕೊಂಡಿದ್ದಾರೆ.
ಉದ್ಯೋಗ
ಜಮೀರ್ ಪುತ್ರ ಝೈದ್ ಖಾನ್‌ಗೆ ಮಾರ್ಗದರ್ಶನ ನೀಡುತ್ತಿದ್ದ ಅಪ್ಪು
ಜಮೀರ್ ಪುತ್ರ ಝೈದ್ ಖಾನ್ ಸ್ಯಾಂಡಲ್‌ವುಡ್‌ಗೆ ಬನಾರಸ್ ಸಿನಿಮಾ ಮೂಲಕ ಎಂಟ್ರಿ ಕೊಡುತ್ತಿದ್ದಾರೆ. ಆದರೆ, ಸಿನಿಮಾಗೆ ಪ್ರವೇಶ ಮಾಡುವುದಕ್ಕೂ ಮುನ್ನ ಅಪ್ಪು ಸಲಹೆ ಪಡೆದಿದ್ದರು. ಅಲ್ಲದೆ ಪುನೀತ್ ಕೂಡ ಪೋನ್ ಮಾಡಿದಾಗಲೆಲ್ಲಾ ಝೈದ್ ಸಿನಿಮಾ ಸಾಗುತ್ತಿರುವ ಬಗ್ಗೆ ಮಾಹಿತಿ ಪಡೆಯುತ್ತಿದ್ದರು. ಅಷ್ಟೇ ಯಾಕೆ, ಪುನೀತ್ ನಿಧನ ಹೊಂದುವ ಕೆಲವೇ ಗಂಟೆಗಳು ಮುನ್ನ ಝೈದ್ ಜೊತೆ ಫೋನ್‌ನಲ್ಲಿ ಮಾತಾಡಿದ್ದರು.
ಅಣ್ಣಾವ್ರ ಕುಟುಂಬ ಹಾಗೂ ಜಮೀರ್ ಕುಟುಂಬದ ನಂಟು ಇಂದು ನಿನ್ನೆಯದಲ್ಲ. ಡಾ.ರಾಜ್‌ಕುಮಾರ್ ಕಾಲದಿಂದಲೂ ಒಡನಾಟವಿದೆ. ಹೀಗಾಗಿ ಪುನೀತ್ ನಿಧನದ ನೋವಿನಲ್ಲಿರುವ ಜಮೀರ್ ಅಹ್ಮದ್ ಖಾನ್ ಇಂದು( ನವೆಂಬರ್ 10)ರಂದು ತನ್ನ ಎರಡೂ ಕಣ್ಣುಗಳನ್ನು ದಾನ ಪತ್ರಕ್ಕೆ ಸಹಿ ಮಾಡಿದ್ದಾರೆ. ಇವರೊಂದಿಗೆ ಜಮೀರ್ ಬೆಂಬಲಿಗರೂ ನೇತ್ರದಾನ ಮಾಡಿದ್ದಾರೆ. ಅತ್ತ ಪುನೀತ್ ಅಭಿಮಾನಿಗಳು ಗ್ರಾಮ, ಗ್ರಾಮಗಳಲ್ಲಿ ತಾವೇ ಸ್ವಯಂ ಪ್ರೇರಿತರಾಗಿ ಕ್ಯಾಂಪ್‌ಗಳನ್ನು ಆಯೋಜನೆ ಮಾಡುತ್ತಿದ್ದಾರೆ.