ಬೆಂಗಳೂರು: ಕರ್ನಾಟಕದ ಸಿಇಟಿ ಪರೀಕ್ಷೆಯ ಫಲಿತಾಂಶ ಆ. 20ರಂದು ಪ್ರಕಟವಾಗಲಿದೆ. ಈ ಬಗ್ಗೆ ಡಿಸಿಎಂ ಡಾ. ಸಿ.ಎನ್. ಅಶ್ವಥ್ ನಾರಾಯಣ ಮಾಹಿತಿ ನೀಡಿದ್ದು, ಕಳೆದ ವರ್ಷ ಎಷ್ಟು ಶುಲ್ಕವನ್ನು ವಿಧಿಸಲಾಗುತ್ತಿತ್ತೋ ಈ ಬಾರಿಯೂ ಅಷ್ಟೇ ಶುಲ್ಕವಿರಲಿದೆ. ಹಾಗೇ, ಕಳೆದ ವರ್ಷದ ಅನುಪಾತದಲ್ಲೇ ಈ ವರ್ಷವೂ ಸೀಟು ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಜುಲೈ 30ರಿಂದ ಆಗಸ್ಟ್ 1ರವರೆಗೆ ಸಿಇಟಿ ಪರೀಕ್ಷೆ ನಡೆಸಲಾಗಿತ್ತು. ಕರ್ನಾಟಕದ ಇತಿಹಾಸದಲ್ಲಿ ಮೊದಲ ಬಾರಿಗೆ ಪರೀಕ್ಷೆ ನಡೆದ ಕೇವಲ 19 ದಿನಗಳಲ್ಲಿ ಸಿಇಟಿ ಫಲಿತಾಂಶ ಪ್ರಕಟಿಸಲಾಗುತ್ತಿದೆ. ಈ ಬಾರಿ ಕೊರೋನಾದಿಂದಾಗಿ ಪರೀಕ್ಷೆಗಳೆಲ್ಲವೂ ತಡವಾಗಿ ನಡೆದಿರುವುದರಿಂದ ವಿದ್ಯಾರ್ಥಿಗಳಿಗೆ ಮುಂದಿನ ತರಗತಿಗೆ ಸೇರಲು ತೊಂದರೆಯಾಗಬಾರದು ಎಂಬ ಕಾರಣಕ್ಕೆ ತ್ವರಿತವಾಗಿ ಫಲಿತಾಂಶ ಪ್ರಕಟಿಸಲಾಗುತ್ತಿದೆ. cetonline.karnataka.gov.in ವೆಬ್ಸೈಟ್ನಲ್ಲಿ ಫಲಿತಾಂಶವನ್ನು ವೀಕ್ಷಿಸಬಹುದು ಎಂದು ಡಿಸಿಎಂ ಅಶ್ವಥ್ ನಾರಾಯಣ ಮಾಹಿತಿ ನೀಡಿದ್ದಾರೆ.
ಆ. 20ರಂದು ಸಿಇಟಿ ಪರೀಕ್ಷೆ ಫಲಿತಾಂಶವನ್ನು ವೀಕ್ಷಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. cetonline.karnataka.gov.in
ಈ ಬಾರಿ ಶುಲ್ಕದಲ್ಲೂ ಯಾವುದೇ ಬದಲಾವಣೆ ಮಾಡಿಲ್ಲ. ಒಂದು ಸಂರಚನೆಯಲ್ಲಿ ಸಿಇಟಿ ವಿದ್ಯಾರ್ಥಿಗಳಿಗೆ ತಲಾ 65,360 ರೂ. ಹಾಗೂ ಕಾಮೆಡ್-ಕೆ ವಿದ್ಯಾರ್ಥಿಗಳಿಗೆ 1,43,748 ರೂ. ಶುಲ್ಕವನ್ನು ನಿಗದಿ ಮಾಡಲಾಗಿದೆ. ಇನ್ನೊಂದರಲ್ಲಿ ಸಿಇಟಿ ವಿದ್ಯಾರ್ಥಿಗಳಿಗೆ 58,806 ರೂ. ಹಾಗೂ ಕಾಮೆಡ್-ಕೆ ವಿದ್ಯಾರ್ಥಿಗಳಿಗೆ 2,01,960 ರೂ. ನಿಗದಿ ಮಾಡಲಾಗಿದೆ ಎಂದು ಅಶ್ವಥ್ ನಾರಾಯಣ ಹೇಳಿದ್ದಾರೆ.
ರಾಜ್ಯದಲ್ಲಿ ಕೊರೋನಾ ಸಂಕಷ್ಟ ಇರುವುದರಿಂದ ಇಂಜಿನಿಯರಿಂಗ್ ಶುಲ್ಕವನ್ನು ಹೆಚ್ಚಳ ಮಾಡಿಲ್ಲ. ಕಳೆದ ವರ್ಷದ ಮಾದರಿಯಲ್ಲೇ ಈ ವರ್ಷವೂ ಸೀಟು ಹಂಚಿಕೆ ಮಾಡಲಾಗುವುದು. ರಾಜ್ಯದಲ್ಲಿ 45:30:25ರ ಅನುಪಾತದಲ್ಲಿ ಸೀಟು ಹಂಚಿಕೆ ಮಾಡಲು ಸೂಚಿಸಲಾಗಿದೆ. ಕೊರೋನಾ ಬಿಕ್ಕಟ್ಟು ನಿಯಂತ್ರಣಕ್ಕೆ ಬಾರದ ಕಾರಣ ಈ ಬಾರಿ ಆನ್ಲೈನ್ನಲ್ಲಿಯೇ ಸಿಇಟಿ ಕೌನ್ಸೆಲಿಂಗ್ ನಡೆಸಲಾಗುವುದು. ವಿದ್ಯಾರ್ಥಿಗಳು ತಾವು ಇರುವ ಜಾಗದಲ್ಲಿಯೇ ಆನ್ಲೈನ್ ಮೂಲಕ ಕೌನ್ಸೆಲಿಂಗ್ನಲ್ಲಿ ಪಾಲ್ಗೊಳ್ಳಬಹುದು ಎಂದು ಕೂಡ ಡಿಸಿಎಂ ತಿಳಿಸಿದ್ದಾರೆ.