ಮುದ್ದೇಬಿಹಾಳ: ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷರಾಗಿ ಸಂಪುಟ ದರ್ಜೆ ಸಚಿವ ಸ್ಥಾನಮಾನ ಹೊಂದಿರುವ ವಿಜಯಪುರ ಜಿಲ್ಲೆ ಮುದ್ದೇಬಿಹಾಳದ ಬಿಜೆಪಿ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿಯವರು ಗುರುವಾರ ವಿದ್ಯಾರ್ಥಿಗಳೊಂದಿಗೆ ಸಹ ಪಂಕ್ತಿಯಲ್ಲಿ ಕುಳಿತು ಸರ್ಕಾರಿ ಶಾಲೆಯ ಮದ್ಯಾಹ್ನದ ಬಿಸಿಯೂಟ ಸೇವಿಸಿ ಗುಣಮಟ್ಟ ಖಚಿತಪಡಿಸಿಕೊಂಡರು.
ಗುಡದಿನ್ನಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ತಮ್ಮ ಕುಟುಂಬದಿಂದ ಉಚಿತ ನೋಟಬುಕ್ ವಿತರಿಸಿದ ನಂತರ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಿಕ್ಷಕರು ಮತ್ತು ಎಲ್ಲ ಮಕ್ಕಳೊಂದಿಗೆ ಮಕ್ಕಳಿಗಾಗಿ ಇರುವ ಪ್ಲೇಟಿನಲ್ಲಿಯೇ ಅನ್ನ ಸಾಂಬಾರ ಹಾಕಿಸಿಕೊಂಡು ಊಟ ಮಾಡಿ ಸರಳತೆ ಮೆರೆದದ್ದು ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ತಾವು ಯಾವುದಾದರೂ ಶಾಲೆಗೆ ದಿಢಿರ್ ಭೇಟಿ ನೀಡಿ ಬಿಸಿಯೂಟದ ಗುಣಮಟ್ಟ ಖಾತರಿ ಪಡಿಸಿಕೊಳ್ಳುವುದಾಗಿ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು.

ಈ ವೇಳೆ ಬಿಇಓ ವೀರೇಶ ಜೇವರಗಿ, ಶಿಕ್ಷಣ ಸಂಯೋಜಕ ಎಚ್.ಬಿ.ಮೇಟಿ ಮತ್ತಿತರರು ಇದ್ದರು. ಸ್ವತಹ ಶಾಸಕರೇ ತಮ್ಮ ಜೊತೆ ಪಂಕ್ತಿಯಲ್ಲಿ ಕುಳಿತು ಬಿಸಿಯೂಟ ಸವಿದದ್ದು ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಖುಷಿ ನೀಡಿದಂತಾಗಿತ್ತು.