ಬೆಂಗಳೂರು : ಪಡಿತರ ಚೀಟಿದಾರರಿಗೆ ರಾಜ್ಯ ಸರ್ಕಾರವು ಮತ್ತೊಂದು ಸಿಹಿಸುದ್ದಿ ನೀಡಲು ಮುಂದಾಗಿದ್ದು, ಮನೆ ಮನೆಗೆ ಪಡಿತರ ತಲುಪಿಸುವ ವ್ಯವಸ್ಥೆ ಜಾರಿಗೆ ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.
ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಅ. 28 ರಂದು ನಡೆಯುವ ಸಭೆಯಲ್ಲಿ ಮನೆ ಮನೆಗೆ ಪಡಿತರ ತಲುಪಿಸುವ ವ್ಯವಸ್ಥೆ ಜಾರಿಗೆ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದ್ದು, ನಿರೀಕ್ಷೆಯಂತೆ ಸಭೆಯಲ್ಲಿ ಒಪ್ಪಿಗೆ ಸಿಕ್ಕರೆ ನವೆಂಬರ್ 1 ರಿಂದಲೇ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ಈ ವ್ಯವಸ್ಥೆ ಜಾರಿಗೆ ಬರಲಿದೆ ಎನ್ನಲಾಗಿದೆ.
ಮನೆ ಮನೆಗೆ ಪಡಿತರ ತಲುಪಿಸುವ ವ್ಯವಸ್ಥೆ ಕುರಿತಂತೆ ಸಚಿವ ಉಮೇಶ್ ಕತ್ತಿ ಇಲಾಖಾ ಅಧಿಕಾರಿಗಳೊಂದಿಗೆ ಮಹತ್ವದ ಚರ್ಚೆ ನಡೆಸಿದ್ದು, ಪಡಿತರ ಹಂಚಿಕೆಗೆ ಸರಕು ಸಾಗಣೆ ಆಟೋ ಬಳಸಲು ಚಿಂತಿಸಲಾಗಿದೆ. ಬೆಂಗಳೂರು ವ್ಯಾಪ್ತಿಗೆ 700 ಆಟೋ ಹಾಗೂ ರಾಜ್ಯಾದ್ಯಂತ ಸುಮಾರು 10,000 ಸರಕ ಸಾಗಣೆ ಆಟೋಗಳ ಅಗತ್ಯವಿರುವ ಬಗ್ಗೆಯೂ ಚರ್ಚಿಸಲಾಗಿದೆ ಎಂದು ತಿಳಿದುಬಂದಿದೆ.