Breaking News

ದೂರದರ್ಶನದಲ್ಲಿ ಬರುವ ಸಿರಿಯಲ್ ನೋಡಿ ಡಾಕ್ಟರ್​ ಆಗುವ ಕನಸನ್ನ ಕಂಡರೈತನ‌ ಮಗಳ

Spread the love

ಬೆಳಗಾವಿ:  ರೈತನ‌ ಮಗಳೊಬ್ಬಳು‌ ಎಂ ಡಿ ಯಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಳ್ಳುವ  ಮೂಲಕ ಇತರ ಬಡ ಹಾಗೂ ರೈತನ ಮಕ್ಕಳಿಗೆ ಮಾದರಿಯಾಗಿದ್ದಾರೆ.

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದ ಡಾ. ಅಶ್ವಿನಿ ಚಿದಾನಂದ ಸೋಂದಕರ ಎಂಬ ವಿದ್ಯಾರ್ಥಿನಿ ಅಪ್ಪಟ ಗ್ರಾಮೀಣ ಪರಿಸರದಲ್ಲಿಯೇ ಹುಟ್ಟಿ, ಬೆಳೆದು ಸರ್ಕಾರಿ ಶಾಲೆಯಲ್ಲಿ ಓದಿ ಬೆಂಗಳೂರಿನ ವೈದ್ಯಕೀಯ ಶಿಕ್ಷಣ ಹಾಗೂ ಸಂಶೋಧನಾ ಕೇಂದ್ರದಲ್ಲಿ ಮೈಕ್ರೋ ಬಯೋಲಾಜಿ ವಿಭಾಗದಲ್ಲಿ 2019-20 ನೇ ಸಾಲಿನಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್​ ಪಡೆದಿದ್ದಾರೆ. ಚಿನ್ನದ ಪದಕ ತನ್ನದಾಗಿಸಿಕೊಂಡು ಬೆಳಗಾವಿ ಜಿಲ್ಲೆಗೆ ಹಾಗೂ ಮೋಳೆ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ. ಇವರ ಸಾಧನೆ ಕಂಡು ಅಶ್ವಿನಿ ಹಾಗೂ ಅವರ ತಾಯಿಗೆ ಜನರು ಸತ್ಕಾರ ಮಾಡಿದ್ದಾರೆ.

ರೈತಾಪಿ ವರ್ಗದಿಂದ ಬಂದ ಡಾ. ಅಶ್ವಿನಿ ಚಿದಾನಂದ ಸೋಂದಕರ ಅವರು ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಎಂಬಿಬಿಎಸ್, ಎಂಡಿ ವರೆಗೆ ಸರ್ಕಾರಿ ಕಾಲೇಜಿನಲ್ಲಿಯೇ ಓದಿ ಈಗ ಎಂಡಿಯಲ್ಲಿ ಈ ಸಾಧನೆ ಮಾಡಿದ್ದಾರೆ.

ಅಶ್ವಿನಿ ತಂದೆ ಚಿದಾನಂದ ಕೃಷಿಯನ್ನೇ ನಂಬಿ ಜೀವನ ನಡೆಸುವಂತವರು. ಆದ್ರೆ ಅಶ್ವಿನಿ ಅವರು ಎಂಡಿ ಓದುವಾಗಲೇ ತಂದೆ ಅಕಾಲಿಕವಾಗಿ ನಿಧನ ಹೊಂದಿದರು. ತಂದೆಯ ನಿಧನದಿಂದ ಧೃತಿಗೆಡದೆ ಕಷ್ಟಪಟ್ಟು ಓದಿ ತಂದೆಯ ಕನಸನ್ನು ನನಸು ಮಾಡಿದ್ದಾರೆ ಈ ಸಾಧಕಿ.

ಸದ್ಯ ಬೆಳಗಾವಿ ಸರ್ಕಾರಿ ಮಹಾವಿದ್ಯಾಲಯದಲ್ಲಿ ಉಪನ್ಯಾಸಕಿ ಹಾಗೂ ಹಿರಿಯ ರೆಸಿಡೆಂಟ್ ವೈದ್ಯಾಧಿಕಾರಿಯಾಗಿ, ಕೊರೊನಾ ವಾರಿಯರ್​ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಣ, ಆಸ್ತಿ ಇದ್ದವರು ಮಾತ್ರ ಎಂಬಿಬಿಎಸ್, ಎಂ ಡಿ ಮಾಡುತ್ತಾರೆ. ಬಡವರಿಗೆ ಇದು ಅಸಾಧ್ಯದ ಮಾತು ಎಂಬ ಮಾತನ್ನು ಸುಳ್ಳು ಮಾಡಿ ರೈತರ ಮಕ್ಕಳು, ಬಡ ಮಕ್ಕಳು ಸಹಿತ ಇಂತಹ ಹುದ್ದೆಗಳನ್ನು ಸಹ ಪಡೆದುಕೊಳ್ಳಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಅಶ್ವಿನಿ.

ಎಂಡಿ ಮಾಡುವಾಗ ಸುಮಾರು 8 ರಿಂದ 10 ಗಂಟೆವರೆಗೆ ಓದಿದ್ದೇನೆ. ಯಾರಾದರೂ ಎಂಬಿಬಿಎಸ್, ಎಂ ಡಿ ಮಾಡುವವರು ಕಷ್ಟಪಟ್ಟು ಓದಿ ಮೆರಿಟ್ ಸೀಟ್ ಪಡೆದುಕೊಳ್ಳಿ. ಇದರಿಂದ ನಿಮ್ಮ ತಂದೆ-ತಾಯಿಗೆ ಹಣದ ಬಾರ ಕಡಿಮೆ ಮಾಡಬಹುದು. ಸಾಧನೆ ಮಾಡಲು ಸಹ ಸಹಕಾರಿಯಾಗುತ್ತದೆ ಎಂದು ಸಲಹೆಯನ್ನೂ ನೀಡಿದ್ದಾರೆ.
 

ದೂರದರ್ಶನದಲ್ಲಿ ಬರುವ ಸಿರಿಯಲ್ ನೋಡಿ ಡಾಕ್ಟರ್​ ಆಗುವ ಕನಸನ್ನ ಕಂಡ ಮಗಳಿಗೆ, ಧೈರ್ಯದ ಮಾತುಗಳನ್ನ ಹೇಳುವುದರ ಮೂಲಕ ಎಷ್ಟೇ ಕಷ್ಟ ಬಂದರೂ ನಿನ್ನನ್ನ ಡಾಕ್ಟರ್​ ಓದಿಸುತ್ತೇವೆ ಎಂದು ಹೇಳಿದ ತಾಯಿಯ ಮಾತಿನಂತೆ ಮಗಳು ಇಂದು ಕಷ್ಟ ಪಟ್ಟು ಓದಿ ಎಂಡಿಯಾಗಿದ್ದಾರೆ. ಅಶ್ವಿನಿ ಹತ್ತನೇ ತರಗತಿ ಓದಬೇಕಾದರೆ ಮನೆಯಲ್ಲಿ ಸರಿಯಾದ ಕರೆಂಟ್ ವ್ಯವಸ್ಥೆ ಕೂಡಾ ಇರಲಿಲ್ಲ. ಅಂತಹ ವೇಳೆಗೆ ತನ್ನಷ್ಟಕ್ಕೆ ತಾನೇ ಓದುತ್ತಿದ್ದಳು. ಆದರೆ ಈ ಸಾಧನೆ ನೋಡಲು ಅವರ ತಂದೆ ಇರಬೇಕಾಗಿತ್ತು ಎಂದು ಮಗಳ ಸಾಧನೆ ಬಗ್ಗೆ ತಾಯಿ ಅಕ್ಕಾತಾಯಿ ಸೋಂದಕರ ಆನಂದಭಾಷ್ಪ ಸುರಿಸುತ್ತಾರೆ.


Spread the love

About Laxminews 24x7

Check Also

ಖಾನಾಪೂರ ಕೋ ಆಪ್ (ಅರ್ಬನ್ ಬ್ಯಾಂಕ್)ಬ್ಯಾಂಕಿನ ಮತ ಎಣಿಕೆ ಮಂಗಳವಾರ ನಡೆಯುವ ಸಾಧ್ಯತೆ.

Spread the love ಖಾನಾಪೂರ :-ಖಾನಾಪೂರ ಕೋ ಆಪ್ ಬ್ಯಾಂಕ್ (ಅರ್ಬನ್ ಬ್ಯಾಂಕ್) ನ ಚುನಾವಣೆ ನಡೆದು ಹದಿನೈದರಿಂದ ಇಪ್ಪತ್ತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ