ಬೀದರ್: ರಾಷ್ಟ್ರ ಭಕ್ತ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ತಾಲಿಬಾನ್‌ಗೆ ಹೋಲಿಕೆ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮಾನಸಿಕತೆ ಬಗ್ಗೆ ನೋವಿದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಬೇಸರ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿಯಾಗಿದ್ದ ಜವಾಹರಲಾಲ್ ನೆಹರು ಅವರು ಆರ್‌ಎಸ್‌ಎಸ್‌ನ್ನು ಗಣರಾಜ್ಯೋತ್ಸವದ ಪಥ ಸಂಚಲನಕ್ಕೆ ಅವಕಾಶ ಮಾಡಿಕೊಟ್ಟಿದ್ದರು. ಸಿದ್ದರಾಮಯ್ಯನವರು ಕಾಂಗ್ರೆಸ್‌ನ್ನು ಪರಂಪರೆಯನ್ನು ಒಪ್ಪಿಕೊಂಡವರು ಮತ್ತು ನೆಹರು ಅವರನ್ನು ಗೌರವಿಸುತ್ತಾರೆ ಎಂದಾದರೆ ಆರ್‌ಎಸ್‌ಎಸ್‌ನ್ನು ಸಹ ಗೌರವಿಸಬೇಕು. ರಾಷ್ಟ್ರ ಭಕ್ತ ಆರ್‌ಎಸ್‌ಎಸ್‌ನ್ನು ದೂರುವವರು ಎಂಥ ಒಳ್ಳೆಯವರನ್ನು ಸಹ ದೂರಲು ಸಿದ್ಧರಿರುತ್ತಾರೆ ಎಂದು ದಲೈಲಾಮಾ ಹೇಳಿದ್ದರು ಎಂದು ನೆನಪಿಸುವ ಮೂಲಕ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಮತಾಂತರದ ಹಿಂದೆ ಮುಗ್ದ ಜನರ ಮಾನಸಿಕತೆ ದುರುಪಯೋಗ ಮಾಡಿಕೊಳ್ಳುವುದು ಮತ್ತು ಆರ್ಥಿಕ ಸಂಕಷ್ಟದಲ್ಲಿರುವವರನ್ನು ಮತಾಂತರ ಮಾಡುವುದು ನಡೆಯುತ್ತಿದೆ. ವಂಚನೆ ಮತಾಂತರವನ್ನು ಸರ್ಕಾರ ವಿರೋಧಿಸುತ್ತದೆ. ಎಲ್ಲರೂ ಒಗ್ಗಟ್ಟಾಗಿ ಮತಾಂತರ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕ್ರಮ ವಹಿಸಲಾಗುವುದು. ಈ ನಿಟ್ಟಿನಲ್ಲಿ ಕಾಯ್ದೆ ಜಾರಿ ಕುರಿತಂತೆ ಯೋಚನೆಯೂ ನಡೆಯುತ್ತಿದೆ ಎಂದು ತಿಳಿಸಿದರು.
ಬೀದರ್ ಜಿಲ್ಲೆಯಲ್ಲಿ ಅನ್ಯ ಜಾತಿಯವರು ಪರಿಶಿಷ್ಟ ಜಾತಿ ಕೋಟಾದಲ್ಲಿ ಮೀಸಲಾತಿ ಮತ್ತು ಉದ್ಯೋಗ ಸೌಲಭ್ಯಗಳನ್ನು ಪಡೆಯುತ್ತಿರುವ ಕುರಿತು ಸಂಘಟನೆಗಳಿಂದ ದೂರು ಬಂದಿದ್ದು, ರಾಜ್ಯ ಮಟ್ಟದ ಸತ್ಯ ಶೋಧನಾ ಸಮಿತಿಯಲ್ಲಿ ಈ ಬಗ್ಗೆ ಚರ್ಚಿಸಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
Laxmi News 24×7