ಕಿತ್ತೂರು: ನಿರಂತರ ಮಳೆಯಿಂದಾಗಿ ತೆಗ್ಗು, ಗುಂಡಿ ಬಿದ್ದು ಸಂಪೂರ್ಣ ಹಾಳಾಗಿದ್ದ ನೇಗಿನಾಳ- ಬೈಲಹೊಂಗಲ ರಸ್ತೆ ದುರಸ್ತಿ ಮಾಡುವಂತೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾದ ಹಿನ್ನೆಲೆ ಕೊನೆಗೆ ಎಚ್ಚತ್ತ ಅಧಿಕಾರಿಗಳು ರಸ್ತೆ ದುರಸ್ತಿಗೆ ಮುಂದಾಗಿದ್ದಾರೆ.
ಎಂ.ಕೆ ಹುಬ್ಬಳ್ಳಿಯಿಂದ ನೇಗಿನಾಳ ಮಾರ್ಗವಾಗಿ ಬೈಲಹೊಂಗಲ ತಲುಪುವ ರಸ್ತೆ ಸಂಪೂರ್ಣ ನಾಶವಾಗಿತ್ತು. 1 ಕೀಮಿ ವರೆಗೂ ರಸ್ತೆ ಸಂಪೂರ್ಣ ಹಾಳಾಗಿದ್ದು, ತಗ್ಗು , ಗುಂಡಿಯಲ್ಲಿ ಮಳೆ ನೀರು ತುಂಬಿದ್ದರಿಂದ ಸಣ್ಣ ಪುಟ್ಟ ಅಪಘಾತಗಳು ಸಂಭವಿಸಿ ವಾಹನ ಸವಾರರು ಪರದಾಡುವಂತಾಗಿತ್ತು.
ಇದರಿಂದಾಗಿ ಗ್ರಾಮಸ್ಥರು ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿ, ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರು ಕೂಡ ಯಾವುದೇ ಪ್ರಯೋಜನವಾಗಿರಲಿಲ್ಲ. ಈ ಹಿನ್ನೆಲೆ ಶಾಸಕ ಸತೀಶ ಜಾರಕಿಹೊಳಿ ಅವರ ಅಭಿಮಾನಿ ಹಬೀಬ್ ಶಿಲ್ಲೆದಾರ್ ಮತ್ತವರ ಸಂಘಡಿಗರು ರಸ್ತೆ ಸಮಸ್ಯೆಯನ್ನು ಬಗೆಹರಿಸುವಂತೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದರು.
ಅಲ್ಲದೇ ರಸ್ತೆ ದುರಸ್ತಿ ವಿಚಾರವಾಗಿ ಸೋಮವಾರ ಧರಣಿ ನಡೆಸುವುದಾಗಿ ಮನವಿ ಮಾಡಿದ್ದರು. ಇದರಿಂದ ಎಚ್ಚೆತ್ತ ಲೋಕೋಪಯೋಗಿ ಅಧಿಕಾರಿಗಳು ರಸ್ತೆ ದುರಸ್ತಿ ಮುಂದಾಗಿದ್ದಾರೆ.