ಬೆಂಗಳೂರು: ನಿಷೇದಾಜ್ಞೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿಯಲ್ಲಿ ಇಂದು ನಮಾಜ್‍ಗೆ ನಿಷೇಧ ಮಾಡಲಾಗಿದೆ.ಇಂದು ಶುಕ್ರವಾರ ಆಗಿರುವುದರಿಂದ ಸಾಮೂಹಿಕವಾಗಿ ನಮಾಜ್ ಮಾಡುತ್ತಾರೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಹೀಗಾಗಿ ಸಾಮೂಹಿಕ ಪ್ರಾರ್ಥನೆಗಾಗಿ ಅವಕಾಶ ನಿಷೇಧಿಸಲಾಗಿದೆ. ಕೇವಲ ಮೌಲ್ವಿ ಒಬ್ಬರು ಮಾತ್ರ ಹೋಗಿ ನಮಾಜ್ ಮಾಡಲು ಅವಕಾಶ ನೀಡಲಾಗಿದೆ. ಇಂದು ನಿಷೇದಾಜ್ಞೆ ಪ್ರದೇಶದಲ್ಲಿ ನಮಾಜ್ ನಿಷೇಧ ಮಾಡಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಭದ್ರತೆಯನ್ನು ನಿಯೋಜನೆ ಮಾಡಲಾಗಿದೆ. ಕೆಎಸ್‌ಆರ್‌ಪಿ, ಸಿಎಆರ್ ತುಕಡಿ ಸೇರಿ ಸುಮಾರು 1,500 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ.
ಅಲ್ಲದೇ ಭದ್ರತೆಯಲ್ಲಿರುವ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ನಮಾಜ್ ಇದೇ ಎಂದು ಯಾರೂ ಕೂಡ ಅಡ್ಡಾಡದಂತೆ ನೋಡಿಕೊಳ್ಳಿ. ಯಾರೂ ಕೂಡ ಮೈಮರೆತು ಇರಬೇಡಿ, ಅನವಶ್ಯಕವಾಗಿ ಓಡಾಡದಂತೆ ನಿಗಾ ವಹಿಸಿ ಎಂದು ಡಿಸಿಪಿ ಶರಣಪ್ಪ ಖಡಕ್ ಸೂಚನೆ ನೀಡಿದ್ದಾರೆ.
ಸೂಕ್ಷ್ಮ ಪರಿಸ್ಥಿತಿಯನ್ನ ಅರ್ಥ ಮಾಡಿಕೊಳ್ಳಬೇಕು, ಯಾವುದೇ ರೀತಿ ನಿರ್ಲಕ್ಷಕ್ಕೆ ಅವಕಾಶ ಇಲ್ಲ. ನಮ್ಮ ಡ್ಯೂಟಿಯಲ್ಲಿ ಶಿಸ್ತಿನಿಂದ, ಪರಿಸ್ಥಿತಿಯನ್ನ ಗಣನೆಗೆ ತೆಗೆದುಕೊಂಡು ಕಾರ್ಯ ನಿರ್ವಹಿಸಿ. ನಾವು ದೊಡ್ಡ ಕುಟುಂಬ ಇದ್ದೇವೆ, ಒಂದಾಗಿ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಇದು ನಿಮ್ಮ ವ್ಯಾಪ್ತಿಯಲ್ಲಿ ಇಲ್ಲದೆ ಹೋದರು ತಾರತಮ್ಯ ಮಾಡಬಾರದು. ಖಾಕಿಯ ಹೆಮ್ಮೆಯನ್ನ ಉಳಿಸಿಕೊಳ್ಳಬೇಕು ಎಂದು ಡಿಸಿಪಿ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ.
144 ಸೆಕ್ಷನ್ ಜಾರಿಯಾಗಿದೆ. ಹೀಗಾಗಿ ನಮಾಜ್‍ಗೆ ಅನುಮತಿ ಇಲ್ಲ. ಯಾರ ಮೇಲೂ ಅನವಶ್ಯಕ ಲಾಠಿ ಬಿಸುವಂತಿಲ್ಲ. ಬೆಂಗಳೂರು, ಕರ್ನಾಟಕ ಪೊಲೀಸರು ಅಂದರೆ ಎಲ್ಲರೂ ಹೆಮ್ಮೆಪಡಬೇಕು. ಆ ರೀತಿ ಕೆಲಸ ಮಾಡಬೇಕು. ನಾನು ವ್ಯಾಪ್ತಿಯಲ್ಲಿ ರೌಂಡ್ಸ್‌ನಲ್ಲಿ ಇರುತ್ತೀನಿ ಎಂದು ಶರಣಪ್ಪ ತಿಳಿಸಿದರು.