ವಿಧಾನಸೌಧ: ಎಂಎಲ್‌ಎ ಆದರೂ ಸಹ ಟೋಲ್ ಬೂತ್ಗಳಲ್ಲಿ ನಮಗೆ ಅವಮಾನ ಆಗುತ್ತಿದೆ. ಪಾಸ್ ಇದ್ದರೂ ಐಡಿ ಕಾರ್ಡ್ ಕೇಳುತ್ತಾರೆ ಎಂದು ಜೆಡಿಎಸ್ ಶಾಸಕ ಅನ್ನದಾನಿ ವಿಧಾನಸಭಾ ಕಲಾಪದಲ್ಲಿ ಸರ್ಕಾರದ ಗಮನ ಸೆಳೆದರು. ಐಟಿ ಕಾರ್ಡನ್ನು ಟೋಲ್ಗಳಲ್ಲಿ ತೋರಿಸಿದರೆ ಸ್ಕ್ಯಾನ್ ಮಾಡಬೇಕು ಅಂತಾರೆ. ತುರ್ತು ಸಂದರ್ಭದಲ್ಲಿ ನಮಗೆ ಕೂಡಾ ಪ್ರಯಾಣಿಸಲಾಗುತ್ತಿಲ್ಲ. ನಮ್ಮ ಪಾಸ್‌ಅನ್ನು ಅನುಮಾನವಾಗಿ ನೋಡುತ್ತಾರೆ. ವಿಪಿಐ ಲೈನ್ನಲ್ಲಿಯೂ ಅವಕಾಶ ನೀಡುತ್ತಿಲ್ಲ ಎಂದು ಶಾಸಕ ಅನ್ನದಾನಿ ಆಕ್ಷೇಪ ವ್ಯಕ್ತಪಡಿಸಿದರು.
ಶಾಸಕ ಅನ್ನದಾನಿ ಅವರ ಆಕ್ಷೇಪಕ್ಕೆ ಉತ್ತರಿಸಿದ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್, ದ್ವಿಪಥ ರಸ್ತೆಯಲ್ಲಿ ವಿಐಪಿ ಲೈನ್ ಸಾಧ್ಯವಿಲ್ಲ, ಟೋಲ್ನಲ್ಲಿ ವಿಐಪಿ ಲೈನ್ ಸಮಸ್ಯೆ ಇದೆ. ಪಾಸ್ ದುರುಪಯೋಗ ಕಾರಣಕ್ಕಾಗಿ ಟೋಲ್ ಬೂತ್ನಲ್ಲಿ ಐಡಿ ಕಾರ್ಡ್ ಕೇಳುತ್ತಿದ್ದಾರೆ. ಈ ಬಗ್ಗೆ ಸೂಚನೆ ಕೊಡುತ್ತೇನೆ ಎಂದು ತಿಳಿಸಿದರು.
ಈ ವೇಳೆ ಮಧ್ಯಪ್ರವೇಶ ಮಾಡಿದ ಜೆಡಿಎಸ್ ಶಾಸಕ ಶಿವಲಿಂಗೇಗೌಡ, ಶಾಸಕರಿಗೆ ಕೊಟ್ಟಿರುವ ಪಾಸ್ ವಾಪಸ್ ತಗೊಳ್ಳಿ, ನಾವೇನು ಭಿಕ್ಷುಕರಾ? ನಮಗೆ ಮರ್ಯಾದೆ ಪ್ರಶ್ನೆ, ನಾವು ದುಡ್ಡು ಕೊಟ್ಟು ಹೋಗುತ್ತೇವೆ. ವಿಶೇಷ ರಿಯಾಯಿತಿ ಎಂದು ಪಾಸ್ ನೀಡಿದರೂ ನಮಗೆ ತೊಂದರೆ ಕೊಡುತ್ತಾರೆ. ಜನಪ್ರತಿನಿಧಿಗಳಿಗೆ ಪ್ರತ್ಯೇಕ ಮಾರ್ಗ ಮಾಡಿ, ಇದು ನಮ್ಮ ಗೌರವದ ಪ್ರಶ್ನೆ ಆಗುತ್ತದೆ ಎಂದು ಆಗ್ರಹಿಸಿದರು.
ಈ ಎಲ್ಲ ಚರ್ಚೆ-ಉತ್ತರ-ಆಕ್ಷೇಗಳ ನಂತರ ಮಾತನಾಡಿದ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ, ‘ಸದನದಲ್ಲಿ ಜನರ ಸಮಸ್ಯೆಗಳ ಬಗ್ಗೆ ಚರ್ಚಿಸೋಣ, ಜನರ ಕಷ್ಟಗಳಿಗೆ ಪರಿಹಾರ ಹುಡುಕೋಣ. ಜನಪ್ರತಿನಿಧಿಗಳ ಸಮಸ್ಯೆಗಳನ್ನು ನಾವೇ ಬೇರೊಂದು ಸಭೆ ಕರೆದು ಕುಳಿತು ಮಾತನಾಡಿ ಪರಿಹರಿಸಿಕೊಳ್ಳೋಣ’ ಎಂದು ಶಾಸಕರನ್ನು ಸಮಾಧಾನಗೊಳಿಸಿದರು.
Laxmi News 24×7