ಕೋಲಾರ: ಪ್ರೀತಿಸಿದ ಯುವತಿಯನ್ನು ಹಾಡಹಗಲೇ ನಡುರಸ್ತೆಯಲ್ಲಿ ಯುವಕ ಅಪಹರಿಸಿದ ಘಟನೆ ಇಂದು ಕೋಲಾರದಲ್ಲಿ ನಡೆದಿದೆ.ಶಿವ ಯುವತಿಯನ್ನು ಅಪಹರಿಸಿದ ಯುವಕ. ಪ್ರೀತಿಸಿ ಇನ್ನೇನು ಮದುವೆಯಾಗಬೇಕು ಎಂದುಕೊಂಡಿದ್ದ ವೇಳೆ ಯುವತಿಯ ಕುಟುಂಬಸ್ಥರು ನಿರಾಕರಿಸಿದ್ದರು. ಈ ಹಿನ್ನೆಲೆ ಸಿನಿಮಾ ಸ್ಟೈಲ್‍ನಲ್ಲಿ ಪ್ರಿಯಕರ ತನ್ನ ಪ್ರಿಯತಮೆಯನ್ನ ಕಿಡ್ನಾಪ್ ಮಾಡಿದ್ದಾನೆ. ಜನ ನಿಬಿಡ ಪ್ರದೇಶದಲ್ಲಿ ಹಾಡ ಹಗಲೆ ಪ್ರೀತಿಸಿದ ಯುವತಿಯನ್ನ ಕಿಡ್ನಾಪ್ ಮಾಡಿದ ಯುವಕನ ಕೈ ಚಳಕಕ್ಕೆ ಈಡೀ ಕೋಲಾರ ನಗರ ಬೆಚ್ಚಿ ಬಿದ್ದಿದೆ.

ಕೋಲಾರ ನಗರದ ಎಂಬಿ ರಸ್ತೆಯಲ್ಲಿರುವ ರೆಡ್ಡಿ ಎಲೆಕ್ಟ್ರಿಕಲ್ ಬಳಿ ಈ ಘಟನೆ ನಡೆದಿದ್ದು, ಇಂದು ಮದ್ಯಾಹ್ನ 12 ಗಂಟೆ ಸುಮಾರಿಗೆ ಯುವತಿಯನ್ನ ಕಿಡ್ನಾಪ್ ಮಾಡಿದ್ದಾನೆ. ಕೋಲಾರ ನಗರದ ಕಿಲಾರಿಪೇಟೆಯ ಶಿವ ಎಂಬ ಯುವಕ ಕಳೆದ 5 ವರ್ಷಗಳಿಂದ ದೇವಾಂಗಪೇಟೆಯ ಯುವತಿಯನ್ನ ಪ್ರೀತಿಸುತ್ತಿದ್ದ. ಆದ್ರೆ ಇತ್ತೀಚೆಗೆ ಯುವತಿಯ ಪೋಷಕರು ಇಬ್ಬರ ಪ್ರೀತಿಗೆ ನಿರಾಕರಿಸಿದ್ದಾರೆ.

ಅಲ್ಲದೆ ಯುವತಿಗೆ ಬೇರೆ ಮದುವೆ ಮಾಡಲು ಮುಂದಾಗಿದ್ದಾರೆ. ಇದರಿಂದ ಪ್ಲಾನ್ ಮಾಡಿದ ಪ್ರಿಯಕರ ಸ್ನೇಹಿತನ ಇನ್ನೋವಾ ಕಾರ್‍ನಲ್ಲಿ ಯುವತಿಯನ್ನ ಸಿನಿಮಾ ಸ್ಟೈಲ್ ನಲ್ಲಿ ಕಿಡ್ನಾಪ್ ಮಾಡಿದ್ದಾನೆ.ಯುವತಿಯ ಜೊತೆಗಿದ್ದ ಪುಟ್ಟ ಬಾಲಕಿ ಚೀರಾಟದಿಂದ ಸ್ಥಳೀಯರು ಕೂಡ ಸುತ್ತುವರಿದಿದ್ದಾರೆ. ಅಷ್ಟೋತ್ತಿಗಾಗಲೆ ಯುವತಿಯನ್ನ ಅಪಹರಿಸಿ ಮಿಂಚಿನಂತೆ ಮಾಯವಾಗಿದ್ದಾನೆ. ಇನ್ನೂ ಕಿಡ್ನಾಪ್ ಮಾಡಿದ ದೃಶ್ಯ ರೆಡ್ಡಿ ಎಲೆಕ್ಟ್ರಕಲ್‍ನಲ್ಲಿ ಅಳವಡಿಸಿದ್ದ ಸಿಸಿಟಿವಿ ಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಸ್ಥಳಕ್ಕೆ ಗಲ್‍ಪೇಟೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.
Laxmi News 24×7