ಬೆಂಗಳೂರು: ಆರ್ ಎಸ್ ಎಸ್, ಸಂಘ ಪರಿವಾರ ಎಸ್ಡಿಪಿಐ ಎಲ್ಲವೂ ಒಂದೇ. ಅವರು ಒಂದೇ ನಾಣ್ಯದ ಮುಖಗಳಿದ್ದಂತೆ. ಹೆಡ್, ಟೈಲ್ ಎರಡೂ ಅವರೇ ಆಗಿದ್ದಾರೆ. ದಕ್ಷಿಣ ಕನ್ನಡದಲ್ಲಿ ಏನ್ಮಾಡಿದ್ದರು. ಬೆಂಗಳೂರಿನಲ್ಲಿ ಏನು ಮಾಡುತ್ತಿದ್ದಾರೆಂದು ನಮಗೂ ತಿಳಿದಿದೆ. ನಾನು ಸಹ ರಾಜ್ಯದ ಗೃಹ ಸಚಿವನಾಗಿ ಕೆಲಸ ಮಾಡಿದ್ದೇನೆ. ತಮಗೂ ಇದರ ಬಗ್ಗೆ ಮಾಹಿತಿ ಇದೆ ಎಂದು ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡು ಬಿಜೆಪಿಯ ಆಡಳಿತದಲ್ಲಿವೆ. ತಕ್ಷಣವೇ ಎಸ್ ಡಿಪಿಐ ಬ್ಯಾನ್ ಮಾಡಲಿ. ರಾಜ್ಯ ಸರ್ಕಾರಕ್ಕೆ ಸ್ವತಃ ಪೊಲೀಸ್ ಠಾಣೆ ಹಾಗೂ ಪೊಲೀಸರನ್ನು ರಕ್ಷಣೆ ಮಾಡಲಿಕ್ಕೆ ಸಾಧ್ಯವಾಗಿಲ್ಲ ಇನ್ನು ರಾಜ್ಯವನ್ನು ರಕ್ಷಣೆ ಮಾಡುತ್ತಾರೆಯೇ ಎಂದು ಖಾರವಾಗಿಯೇ ಎಂದು ಅವರು ಪ್ರಶ್ನಿಸಿದ್ದಾರೆ.
ಎಸ್ ಡಿಪಿಐ ಕಾಂಗ್ರೆಸ್ ಪಕ್ಷದ ಮತ ಬ್ಯಾಂಕ್ ಎನ್ನುತ್ತಾರೆ. ಹಾಗಿದ್ದರೆ ಅದರಿಂದ ನಮಗೆ ತಾನೆ ನಷ್ಟ ಪಿಎಫ್ ಐ ,ಎಸ್ ಡಿಪಿಐ ಸಂಘಟನೆಯನ್ನು ಬ್ಯಾನ್ ಮಾಡಿ ಎಂದು ಸವಾಲು ಹಾಕಿದ ಅವರು ಇದರಿಂದ ಕಾಂಗ್ರೆಸ್ ಗೆ ಯಾವುದೇ ನಷ್ಟವಿಲ್ಲ. ನೀವು ಆ ಸಂಘಟನೆಗಳನ್ನು ಬ್ಯಾನ್ ಮಾಡಿದರೆ ಕಾಂಗ್ರೆಸ್ ಗೆ ಯಾವುದೇ ನಷ್ಟವಿಲ್ಲ. ಇಂತಹ ಸಂಘಟನೆಗಳಿಂದ ಕಾಂಗ್ರೆಸ್ ಪಕ್ಷದ ಮತಗಳೇ ಹರಿದು ಹಂಚಿಹೋಗುವುದು. ಕಾಂಗ್ರೆಸ್ ಮತ ಬ್ಯಾಂಕ್ ಗಿಂತ ಬಿಜೆಪಿಯವರ ರಾಜಕೀಯ ಹಾಗೂ ಸಾಮಾಜಿಕ ಹಿತಾಸಕ್ತಿಯೇ ಮುಖ್ಯ. ಇದಕ್ಕಾಗಿಯೇ ಬಿಜೆಪಿ ಎಸ್ ಡಿಪಿಐ ಸಂಘಟನೆಯ ಮೇಲೆ ನಿಷೇಧ ಹೇರುತ್ತಿಲ್ಲ ಎಂದು ಗಂಭೀರ ಆರೋಪ ಮಾಡಿದರು.
ಡಿಜೆ ಹಳ್ಳಿ,ಕೆ. ಜೆ. ಹಳ್ಳಿ ಗಲಭೆ ಸಂಬಂಧ ಪಕ್ಷದ ರಾಜ್ಯಾಧ್ಯಕ್ಷರು ಆರು ಜನರ ತಂಡವನ್ನು ರಚಿಸಿದ್ದಾರೆ. ಡಾ. ಜಿ. ಪ ರಮೇಶ್ವರ್ ನೇತೃತ್ವದಲ್ಲಿ ತಂಡವು ಗಲಭೆಯ ಹಿಂದಿನ ಕಾರಣಗಳನ್ನು ತಿಳಿಯಬೇಕಿದೆ. ಪೊಲೀಸರು ಸಮರ್ಪಕ ವಾಗಿ ಕ್ರಮ ಕೈಗೊಳ್ಳಲು ಹಾಗೂ ಸಾರ್ವಜನಿಕರಿಗೆ ಆದ ನಷ್ಟವನ್ನು ಪರಿಶೀಲನೆ ನಡೆಸಲಾಗುವುದು ಎಂದು ಅವರು ತಿಳಿಸಿದರು