ಗದಗ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೋಡಿಮಠದ ಸ್ವಾಮೀಜಿ ಬಳಿ ಭವಿಷ್ಯ ಕೇಳಿದ್ದರೆ ತಪ್ಪೇನು? ಒಂದೊಮ್ಮೆ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಪೂಜ್ಯರು ಭವಿಷ್ಯ ನುಡಿದಿದ್ದರೆ ಸಂತಸದ ಸಂಗತಿ ಎಂದು ಕಾಂಗ್ರೆಸ್ ಹಿರಿಯ ನಾಯಕ ಎಚ್.ಕೆ.ಪಾಟೀಲ್ ಅವರು ಸಚಿವ ಗೋವಿಂದ ಕಾರಜೋಳರಿಗೆ ತಿರುಗೇಟು ನೀಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಸ್ವಾಮೀಜಿಗಳನ್ನು ಭೇಟಿ ಮಾಡುವುದು ಹೊಸದೇನೂ ಅಲ್ಲ. ಮಠಮಾನ್ಯಗಳ ಬಗ್ಗೆ ಅಪಾರ ಗೌರವ ಹೊಂದಿರುವ ಸಿದ್ದರಾಮಯ್ಯ ಅವರು ಆಗಾಗ ಮಠಗಳಿಗೆ ಭೇಟಿ ನೀಡುತ್ತಾರೆ. ಅದರಂತೆ ಕೋಡಿಮಠದ ಶ್ರೀಗಳನ್ನು ಭೇಟಿ ಮಾಡಿರಬಹುದು ಎಂದರು.
ಕಲಬುರಗಿಯಲ್ಲಿ ಎರಡು ಆನೆಗಳನ್ನು ಮನೆಗೆ ಕಳಿಸಲಾಗಿದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯಾವುದೇ ನಾಯಕರ ವಿರುದ್ಧ ವೈಯಕ್ತಿಕವಾದ ಮಾತುಗಳನ್ನು ಆಡಬಾರದು. ಇವು ರಾಜಕೀಯ ಸಂಸ್ಕೃತಿಗೆ ಆರೋಗ್ಯಕರವಲ್ಲದ ಮಾತುಗಳು. ಶಬ್ದಗಳ ಭಂಡಾರದಿಂದ ಬಾಣ ಬಿಡುವಂಥ ಪ್ರಯತ್ನ ಕಟೀಲು ಅವರದ್ದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಲಬುರಗಿ ಪಾಲಿಕೆ ಸಹಿತ ಸ್ಥಳೀಯ ಸಂಸ್ಥೆಗಳಲ್ಲಿ ಕೋಮುವಾದಿ ಶಕ್ತಿಗಳನ್ನು ಸೋಲಿಸಬೇಕು ಎಂಬ ಕೂಗು, ಚಿಂತನೆಗೆ ದೊಡ್ಡಮಟ್ಟದಲ್ಲಿ ಜನಬೆಂಬಲ ವ್ಯಕ್ತವಾಗಿದೆ. ಜಾತ್ಯತೀತ ಶಕ್ತಿಗಳು ಕಾಂಗ್ರೆಸ್ ಜತೆ ಹೊಂದಿಕೊಳ್ಳಬೇಕೆಂದು ಮನವಿ ಮಾಡಿದರು.