ಬೆಂಗಳೂರು: ವಿಧಾನಮಂಡಲ ಅಧಿವೇಶನಕ್ಕೆ ದಿನಾಂಕ ನಿಗದಿ ಮಾಡಲಾಗಿದ್ದು 10 ದಿನಗಳ ಕಾಲ ಮುಂಗಾರು ಅಧಿವೇಶ ನಡೆಯಲಿದೆ.
ಸೆ.13ರಿಂದ ಸೆ.24ರ ವರೆಗೆ ವಿಧಾನಮಂಡಲ ಅಧಿವೇಶ ನಡೆಸಲಾಗುವುದು ಎಂದು ಇಂದು ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.
ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಜೆ.ಸಿ.ಮಾಧುಸ್ವಾಮಿ, ಈ ಬಾರಿ ಬೆಂಗಳೂರಿನಲ್ಲಿಯೇ ಹತ್ತುದಿನಗಳ ಕಾಲ ವಿಧಾನಮಂಡಲ ಅಧಿವೇಶನ ನಡೆಯಲಿದೆ ಎಂದರು. ಸಂಪುಟ ಉಪಸಮಿತಿ ರಚನೆಗೆ ಕ್ಯಾಬಿನೇಟ್ ನಲ್ಲಿ ಒಪ್ಪಿಗೆ ಸೂಚಿಸಲಾಗಿದ್ದು, ಮುಖ್ಯಮಂತ್ರಿಗಳಿಗೆ ಪರಮಾಧಿಕಾರ ನೀಡಲಾಗಿದೆ. ಹೆಣ್ಣುಮಕ್ಕಳ ಶುಚಿ ಯೋಜನೆಗೆ ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಸ್ಯಾನಿಟರಿ ಪ್ಯಾಡ್ ವಿತರಣೆ, ಆರೋಗ್ಯ ಕೇಂದ್ರಗಳಲ್ಲಿ ಬಿಎಸ್ ಸಿ ನರ್ಸಿಂಗ್ ವಿದ್ಯಾರ್ಥಿಗಳ ನೇಮಕಕ್ಕೆ ಅವಕಾಶ ಆಳಂದದಲ್ಲಿ ಮಿನಿವಿಧಾನಸೌಧ ನಿರ್ಮಾಣಕ್ಕೆ ಅನುದಾನ. ಪಚ್ಚನಾಡಿಯಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಸೇರಿದಂತೆ ಹಲವು ಮಹತ್ವದ ಯೋಜನೆಗಳಿಗೆ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು ಎಂದು ಹೇಳಿದರು.