ಬೆಂಗಳೂರು: ದೇಶದ ಜ್ವಲಂತ ವಿಷಯಗಳ ಚರ್ಚೆ ಮಾಡುವ ಬದಲು ಸಂಸತ್ತಿನ ಕಲಾಪವನ್ನು ಬಲಿ ಕೊಟ್ಟು ಪ್ರಜಾಪ್ರಭುತ್ವಕ್ಕೆ ಕಾಂಗ್ರೆಸ್ ದ್ರೋಹ ಮಾಡಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜುಲೈ 22 ರಿಂದ ಆಗಸ್ಟ್ 13 ರವರೆಗೂ ಸಂಸದ ಕಲಾಪ ನಡೆದರೂ, ಅಲ್ಲಿ ವಿರೋಧ ಪಕ್ಷದವರು ಸರಿಯಾದ ಚರ್ಚೆ ಮಾಡಲು ಅವಕಾಶ ಕೊಡಲಿಲ್ಲ. ಕರೊನಾ, ದೇಶದ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಯಬೇಕಿತ್ತು. ಆದರೆ ಕಾಂಗ್ರೆಸ್ನವರು ಸಂಸತ್ ಅಧಿವೇಶನ ನಡೆಯಲು ಬಿಡದೆ ಹೊರನಡೆದಿದ್ದಾರೆ. ಇದನ್ನ ನಾನು ಖಂಡಿಸುತ್ತೇನೆ ಎಂದರು.
ಹಲವು ವರ್ಷದ ಹಳೆಯ ಪಕ್ಷಕ್ಕೆ ಸಂಸತ್‌ನಲ್ಲಿ ಯಾವ ರೀತಿ ನಡೆದುಕೊಳ್ಳಬೇಕು ಅಂತ ಗೊತ್ತಿಲ್ಲ. ಕಾಂಗ್ರೆಸ್ನವರು ಕುಟುಂಬದ ಹಾಗೂ ಮನೆತನದ ಹಿನ್ನೆಲೆ ಉಳ್ಳವರು. ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಆಡಳಿತ ನಡೆಸುತ್ತಿರುವವರು. ಈಗ ಲಜ್ಜೆಗೆಟ್ಟು ಆಡಳಿತ ನಡೆಸಲು ಬಿಡದವರು ನೀವು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ, ಹಿಂದುಳಿದ ವರ್ಗಗಳಿಗೆ, ಮಹಿಳೆಯರಿಗೆ ಸಾಮಾಜಿಕ ನ್ಯಾಯದ ಪರ ನಿಂತಿದ್ದಾರೆ ಎಂದರು. ನಡ್ಡಾಜಿ ನೇತೃತ್ವದ ಪಕ್ಷ ದೇಶದುದ್ದಕ್ಕೂ ಹಿಂದುಳಿದವರನ್ನ ಮುಂದೆ ತರಲು ಮುಂದಾಗಿದ್ದಾರೆ. ಇದನ್ನ ದೇಶದ ಜನ ಸ್ವಾಗತಿಸುತ್ತಿದ್ದಾರೆ. ಕಾಂಗ್ರೆಸ್ನವರು ಬೂಟಾಡಿಕೆ ಮಾತನ್ನ ಆಡುತ್ತಿದ್ದಾರೆ. ಆದರೆ ಸಾಮಾಜಿಕ ನ್ಯಾಯಕ್ಕೆ ಅನ್ಯಾಯ ಮಾಡಿದ್ದಾರೆ ಎಂದರು.
ನರೇಂದ್ರ ಮೋದಿ ಸರ್ಕಾರ ಕೆಳವರ್ಗದವರಿಗೆ, ಹಿಂದುಳಿದವರಿಗೆ ಹಾಗೂ ಶೋಷಿತರ ಪರವಾಗಿದೆ. ರಾಜ್ಯ ಸರ್ಕಾರ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ದೀನದಲಿತರ ಕಲ್ಯಾಣದ ಪರವಾಗಿ ಕೆಲಸ ಮಾಡುತ್ತಿದೆ. ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಬಡವರ, ರೈತರ ಮಕ್ಕಳ ಪರವಾಗಿ ಘೋಷಣೆ ಮಾಡಲಾಗಿದೆ ಎಂದರು.