ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ನಗದು ರಹಿತ ಚಿಕಿತ್ಸೆ ನೀಡಲು ಆರೋಗ್ಯ ಸಂಜೀವಿನಿ ಯೋಜನೆಯಡಿ ವೈದ್ಯಕೀಯ ಸೌಲಭ್ಯ ಕಲ್ಪಿಸಲು ಸರ್ಕಾರ ಮುಂದಾಗಿದೆ.
ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯ ಮೂಲಕ ಯೋಜನೆ ಜಾರಿಗೆ ತರಲಾಗುತ್ತಿದೆ. ನಿಯಮಗಳನ್ನು ರೂಪಿಸಿ ಸರ್ಕಾರಕ್ಕೆ ಸಲ್ಲಿಸುವಂತೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನಿರ್ದೇಶಕರಿಗೆ ಸರ್ಕಾರ ಆದೇಶಿಸಿದೆ.
ರಾಜ್ಯದ ಎಲ್ಲಾ ಸರ್ಕಾರಿ ಆರೋಗ್ಯ ಸಂಸ್ಥೆಗಳು, ಅನುದಾನ ಪಡೆಯುವ ಆರೋಗ್ಯ ಸಂಸ್ಥೆ ಮತ್ತು ಸ್ವಾಯತ್ತ ವೈದ್ಯಕೀಯ ಸಂಸ್ಥೆಗಳು, ಆಯುಷ್ ಇಲಾಖೆಗೆ ಒಳಪಡುವ ಎಲ್ಲಾ ಸರ್ಕಾರಿ ಸಂಸ್ಥೆಗಳು, ಅನುದಾನ ಪಡೆಯುವ ಆರೋಗ್ಯ ಸಂಸ್ಥೆಗಳು, ಖಾಸಗಿ ವಲಯದ ಆಸ್ಪತ್ರೆಗಳು, ವಿಶೇಷ ಆಸ್ಪತ್ರೆಗಳು, ವೈದ್ಯಕೀಯ ತಪಾಸಣೆ ಕೇಂದ್ರಗಳಲ್ಲಿ ಆರೋಗ್ಯ ತಪಾಸಣೆ, ಚಿಕಿತ್ಸೆ ನೀಡಲಾಗುವುದು.
ಹೃದಯ ಸಂಬಂಧಿ ಕಾಯಿಲೆ, ನರಶಸ್ತ್ರಚಿಕಿತ್ಸೆ, ಯುರಾಲಜಿ, ಕ್ಯಾನ್ಸರ್, ಮಕ್ಕಳು ಮತ್ತು ನವಜಾತ ಶಿಶುಗಳ ಶಸ್ತ್ರಚಿಕಿತ್ಸೆ ಯೋಜನೆಯಡಿ ಒಳಗೊಳ್ಳುತ್ತವೆ. ಯೋಜನೆಯ ಕಾರ್ಯಸ್ವರೂಪ, ಯೋಜನಾ ವೆಚ್ಚ, ಚಿಕಿತ್ಸಾ ವಿಧಾನ, ಚಿಕಿತ್ಸೆ ದರ, ಫಲಾನುಭವಿಗಳು ಮೊದಲಾದವುಗಳ ಬಗ್ಗೆ ವಿಸ್ತೃತ ಯೋಜನಾ ವರದಿ ಮತ್ತು ನಿಯಮ ರೂಪಿಸಲು ತಿಳಿಸಲಾಗಿದೆ.