ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ಎದ್ದಿರುವ ಅಸಮಾಧಾನ ಸದ್ಯಕ್ಕೆ ಶಮನವಾಗುವ ಸಾಧ್ಯತೆ ಕಾಣುತ್ತಿಲ್ಲ. ಆನಂದ್ ಸಿಂಗ್, ಎಂಟಿಬಿ ನಾಗರಾಜ್ ಅತೃಪ್ತಿ ಬೆನ್ನಲ್ಲೇ ಈಗ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅತೃಪ್ತರ ಗುಂಪಿಗೆ ಸೇರಿದ್ದಾರೆ.
ತಮ್ಮ ಕುಟುಂಬದವರಿಗೆ ಸಚಿವ ಸ್ಥಾನ ನೀಡದೇ ಇರುವುದಕ್ಕೆ ಅಸಮಾಧಾನಗೊಂಡು, ವರಿಷ್ಠರ ಭೇಟಿಗಾಗಿ ನವದೆಹಲಿಗೆ ತೆರಳಿದ್ದಾರೆ. ಹಾಗೆಯೇ ಮಾಜಿ ಸಚಿವ ಯೋಗೇಶ್ವರ್ ಕೂಡ ದೆಹಲಿಗೆ ತೆರಳಿದ್ದಾರೆ. ದೆಹಲಿಯಲ್ಲಿ ವರಿಷ್ಠರ ಭೇಟಿಗೆ ಪ್ರಯತ್ನ ಮಾಡುತ್ತಿದ್ದು, ಇದುವರೆಗೂ ಯಾರ ಭೇಟಿಯೂ ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ.
ವಿಶೇಷವೆಂದರೆ, ನಾಯಕತ್ವ ಬದಲಾವಣೆ, ಸಂಪುಟ ರಚನೆ ಸಂದರ್ಭದಲ್ಲಿ ಮೌನವಾಗಿಯೇ ಇದ್ದ ಅವರು, ದಿಢೀರನೇ ರಂಗ ಪ್ರವೇಶಿಸಿದ್ದಾರೆ. ಇತ್ತೀಚೆಗಷ್ಟೇ ಬೊಮ್ಮಾಯಿ ಸಂಪುಟದಿಂದ ಹೊರಗುಳಿದಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ರನ್ನು ರಮೇಶ್ ಜಾರಕಿಹೊಳಿ ಭೇಟಿ ಮಾಡಿದ್ದರು. ಇದರ ನಡುವೆಯೇ ಈ ಸರ್ಕಾರ ಬಹಳ ದಿನ ಉಳಿಯುವುದಿಲ್ಲ ಎಂದು ತಮ್ಮ ಆಪ್ತರ ಬಳಿ ರಮೇಶ್ ಜಾರಕಿಹೊಳಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
ಸಂಪುಟ ಸೇರಲು ಯತ್ನಿಸಿದ್ದ ರಮೇಶ್‌ಗೆ ಆರೋಪಗಳ ಹಿನ್ನೆಲೆಯಲ್ಲಿ ಅವಕಾಶ ನೀಡಲು ಆಗುವುದಿಲ್ಲ ಎಂದು ಬಿಜೆಪಿ ಹೇಳಿತ್ತು. ಹೀಗಾಗಿ, ಸಹೋದರ ಬಾಲಚಂದ್ರ ಜಾರಕಿಹೊಳಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಒತ್ತಡ ಹೇರಿದ್ದರು. ಇದಕ್ಕೂ ಬಿಜೆಪಿ ನಾಯಕರು ಒಪ್ಪದೇ ಇದ್ದುದರಿಂದ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.
ದೆಹಲಿಗೆ ತೆರಳಿದ ಸಿಪಿ ಯೋಗೇಶ್ವರ್: ನಾಯಕತ್ವ ಬದಲಾವಣೆಯ ಸಂದರ್ಭದಲ್ಲಿ ಸಕ್ರಿಯರಾಗಿ ಮುಂಚೂಣಿಯಲ್ಲಿದ್ದ ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ನೂತನ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಸಿಗದಿರುವುದಕ್ಕೆ ಬೇಸರಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಲು ತಮ್ಮ ಪಾತ್ರ ಮಹತ್ವದ್ದಾಗಿದ್ದು, ತಮ್ಮನ್ನು ಸಂಪುಟದಿಂದಹೊರಗಿಟ್ಟಿರುವುದು ಸರಿಯಲ್ಲ ಎಂದು ಪಕ್ಷದ ನಾಯಕರ ಬಳಿ ಹೇಳಿಕೊಳ್ಳಲು ತೆರಳಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ಯಾವುದೇ ನಾಯಕರ ಭೇಟಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಈ ಮಧ್ಯೆ, ಸಚಿವ ಸ್ಥಾನ ಸಿಗದೇ ಇರುವುದರಿಂದ ಬೇಸರಗೊಂಡಿರುವ ಮೈಸೂರಿನ ಶಾಸಕ ಎಸ್.ಎ.ರಾಮದಾಸ್ ಅವರು ಸಿಎಂ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ಸ್ವತಃ ಬೊಮ್ಮಾಯಿ ಅವರೇ ಮೈಸೂರಿಗೆ ಭೇಟಿ ನೀಡಿದ್ದರೂ, ಭೇಟಿ ಮಾಡಲು ಬರಲಿಲ್ಲ. ಈ ಬಗ್ಗೆಯೂ ಮಾತನಾಡಿದ ಬೊಮ್ಮಾಯಿ ಅವರು, ರಾಮದಾಸ್ ಜತೆಗೆ ಚರ್ಚಿಸುವುದಾಗಿ ತಿಳಿಸಿದರು.
Laxmi News 24×7