ಬೆಂಗಳೂರು: ಅತಿವೃಷ್ಟಿಯಿಂದ ಬಾಧಿತವಾಗಿರುವ ರಾಜ್ಯಕ್ಕೆ 4 ಸಾವಿರ ಕೋಟಿ ರೂ ಪ್ಯಾಕೇಜ್ ಘೋಷಿಸಬೇಕೆಂದು ಕೇಂದ್ರಕ್ಕೆ ರಾಜ್ಯ ಸರ್ಕಾರ ಮನವಿ ಮಾಡಿಕೊಂಡಿದೆ.
ಇಂದು ಪ್ರಧಾನಿ ಮೋದಿ ಜೊತೆ ನಡೆದ 15 ನಿಮಿಷಗಳ ವಿಡಿಯೋ ಕಾನ್ಫೆರೆನ್ಸ್ನಲ್ಲಿ ರಾಜ್ಯ ಸರ್ಕಾರ ತನ್ನ ರಾಜ್ಯದ 12 ಜಿಲ್ಲೆಗಳಲ್ಲಿನ ಅತಿವೃಷ್ಟಿ ಪರಿಸ್ಥಿತಿಯನ್ನು ವಿವರಿಸಿತು. ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹಾಗೂ ವಿವಿಧ ಅಧಿಕಾರಿಗಳು ರಾಜ್ಯದ ಪರವಾಗಿ ಪಾಲ್ಗೊಂಡಿದ್ದ ಈ ಕಾನ್ಫೆರೆನ್ಸ್ನಲ್ಲಿ ಕೇಂದ್ರ ಸರ್ಕಾರಕ್ಕೆ ವಿವಿಧ ಬೇಡಿಕೆಗಳನ್ನ ಮುಂದಿಟ್ಟರು.
ಅತಿವೃಷ್ಟಿಯಿಂದ ರಾಜ್ಯಕ್ಕೆ ಒಂದು ವಾರದಲ್ಲಿ ಆಗಿರುವ ನಷ್ಟ 4 ಸಾವಿರ ಕೋಟಿ ಎಂದು ಹೇಳಿರುವ ಸರ್ಕಾರ, ತತ್ಕ್ಷಣವೇ ಪರಿಹಾರ ಕೊಡಬೇಕೆಂದು ಒತ್ತಾಯಿಸಿದೆ. ರಕ್ಷಣಾ ಕಾರ್ಯಗಳಿಗೆ ನಾಲ್ಕು ಎನ್ಡಿಆರ್ಎಫ್ ತಂಡಗಳನ್ನ ಕಳುಹಿಸಿಕೊಡಬೇಕು ಎಂದೂ ಕೇಳಿಕೊಂಡಿದೆ.
ರಾಜ್ಯ ಮುಂದಿಟ್ಟಿರುವ ಕೆಲ ಬೇಡಿಕೆಗಳು:
* ಅತಿವೃಷ್ಟಿಯಿಂದ ಬಾಧಿತವಾಗಿರುವ ರಾಜ್ಯಕ್ಕೆ 4 ಸಾವಿರ ಕೋಟಿ ರೂ ಪರಿಹಾರ ಪ್ಯಾಕೇಜ್ ತತ್ಕ್ಷಣವೇ ಘೋಷಿಸಿ
* ರಾಜ್ಯಕ್ಕೆ ನಾಲ್ಕು ಎನ್ಡಿಆರ್ಎಫ್ ತಂಡ ಕಳುಹಿಸಿ
* ಕೃಷ್ಣಾ ಬೇಸಿನ್ನಲ್ಲಿ ಆಗಿರುವ ಹಾನಿಯ ಅಧ್ಯಯನಕ್ಕೆ ಪ್ರತ್ಯೇಕ ತಂಡ ಕಳುಹಿಸಿ
* ಪಶ್ಚಿಮ ಘಟ್ಟಗಳಿಗೆ ಆಗಿರುವ ಹಾನಿ ಹಾಗೂ ಭೂಕುಸಿತಗಳ ಅಧ್ಯಯನಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ತಂಡ ಕಳುಹಿಸಿ* ಮಳೆಹಾನಿಗೆ ಪ್ರತ್ಯೇಕ ಪ್ಯಾಕೇಜ್ ಕೊಡಿ
ಪ್ರಧಾನಿ ಮೋದಿ ಅವರು ಕರ್ನಾಟಕ ಸೇರಿದಂತೆ ಆರು ರಾಜ್ಯಗಳ ಜೊತೆ ಇವತ್ತು ವಿಡಿಯೋ ಸಂವಾದ ನಡೆಸಿದರು. ಸಂವಾದದ ಬಳಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಕಂದಾಯ ಸಂಚಿವ ಆರ್. ಅಶೋಕ್ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡರು.