ಕಾನ್ಪುರ: ಉತ್ತರಪ್ರದೇಶದ ಕಾನ್ಪುರದಲ್ಲಿ 8 ಮಂದಿ ಪೊಲೀಸರನ್ನು ಹತ್ಯೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡಿವೈಎಸ್ಪಿ, ಮೂವರು ಸಬ್ ಇನ್ಸ್ ಪೆಕ್ಟರ್‍ಗಳು ಹಾಗೂ ನಾಲ್ಕು ಮಂದಿ ಕಾನ್ಸ್ ಸ್ಟೇಬಲ್ ಗಳನ್ನು ಕಾನ್ಪುರದ ಡಿಕ್ರು ಗ್ರಾಮದಲ್ಲಿ ಕ್ರಿಮಿನಲ್ ಗ್ಯಾಂಗ್ ಹತ್ಯೆ ಮಾಡಿದೆ. ಈ ಘಟನೆ ಉತ್ತರಪ್ರದೇಶ ರಾಜಧಾನಿ ಲಕ್ನೋದಿಂದ 150 ಕಿ.ಮಿ ದೂರದಲ್ಲಿ ನಡೆದಿದೆ.
ಮೃತರನ್ನು ಸಿಒ ದೇವೇಂದ್ರ ಕುಮಾರ್ ಮಿಶ್ರಾ, ಎಸ್‍ಒ ಮಹೇಶ್ ಯಾದವ್, ಅನೂಪ್ ಕುಮಾರ್, ಸಬ್ ಇನ್ಸ್ ಪೆಕ್ಟರ್ ನೆಬುಲಾಲ್, ಕಾನ್ ಸ್ಟೇಬಲ್ ಸುಲ್ತಾನ್ ಸಿಂಗ್, ರಾಹುಲ್, ಜಿತೇಂದ್ರ ಹಾಗೂ ಬಬ್ಲು ಎಂದು ಗುರುತಿಸಲಾಗಿದೆ.
ಮೂರು ಪೊಲೀಸ್ ಠಾಣೆಯ ಈ ಪೊಲೀಸರ ತಂಡ ಗ್ರಾಮಕ್ಕೆ ತೆರಳಿ 60 ಪ್ರಕರಣ ದಾಖಲಾಗಿದ್ದ ವಿಕಾಸ್ ದುಬೆಯನ್ನು ಬಂಧಿಸಲು ತೆರಳಿತ್ತು. ಇತ್ತೀಚೆಗೆ ವಿಕಾಸ್ ವಿರುದ್ಧ ಕೊಲೆ ಯತ್ನ ಪ್ರಕರಣವೊಂದು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲಿಸರ ತಂಡ ಗ್ರಾಮಕ್ಕೆ ದಾಳಿ ನಡೆಸಿತ್ತು.
ಆತನನ್ನು ಬಂಧಿಸುವುದೇ ಪೊಲೀಸರ ಉದ್ದೇಶವಾಗಿತ್ತು. ಆದರೆ ಈ ವೇಳೆ ಆರೋಪಿ ಬೆಂಬಲಿಗರು ಹೊಂಚು ಹಾಕಿ ಮೂರು ಕಡೆಗಳಿಂದ ಪೊಲೀಸರ ಮೇಲೆ ಗುಂಡು ಹಾರಿಸಿದ್ದಾರೆ. ಒಟ್ಟಿನಲ್ಲಿ ಗ್ಯಾಂಗ್ ಪ್ಲಾನ್ ಮಾಡಿಯೇ ಈ ಕೊಲೆಗಳನ್ನು ನಡೆಸಿದ್ದಾರೆ ಎಂದು ಕಾನ್ಪುರದ ಪೊಲೀಸ್ ಅಧಿಕಾರಿ ದಿನೇಶ್ ಕುಮಾರ್ ತಿಳಿಸಿದ್ದಾರೆ.
ಪೊಲೀಸರು ಗ್ರಾಮಕ್ಕೆ ತೆರಳಿರುವ ಸುಳಿವು ಸಿಗುತ್ತಿದ್ದಂತೆಯೇ ದುಬೆ ಬೆಂಬಲಿಗರು ರಸ್ತೆ ಬ್ಲಾಕ್ ಮಾಡಿದ್ದಾರೆ. ಅಲ್ಲದೆ ಪೊಲೀಸರು ಗ್ರಾಮದೊಳಗೆ ತೆರಳುತ್ತಿದ್ದಂತೆಯೇ ಇತ್ತ ರಸ್ತೆ ಬ್ಲಾಕ್ ಮಾಡಿದ್ದಾರೆ. ನಂತರ ಪೊಲೀಸರ ಮೇಲೆ ಗುಂಡಿನ ಸುರಿಮಳೆಗೈದಿದ್ದಾರೆ ಎಂದು ಅಲ್ಲಿನ ಡಿಜಿಪಿ ಹೇಳಿದ್ದಾರೆ.